ಅಯೋಧ್ಯೆ: ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ, ಶತ ಶತಮಾನಗಳ ಹೋರಾಟ ಸಾರ್ಥವಾಗಿದೆ,ಟೆಂಟ್ ಅಲ್ಲ, ಇನ್ನು ಮುಂದೆ ಭವ್ಯ ಮಂದಿರದಲ್ಲಿ ಶ್ರೀರಾಮ ದರ್ಶನವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು.
ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಮೂಲಕ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದ್ದು, ರಾಮಜನ್ಮಭೂಮಿ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಜನತೆಯನ್ನುದ್ದೇಶಿ ಮೋದಿ ಮಾತನಾಡಿದರು.
ಸಿಯಾವರ ರಾಮಚಂದ್ರ ಎಂದು ಭಾಷಣ ಆರಂಭಿಸಿದ ಮೋದಿ, ಹೋರಾಟ, ತ್ಯಾಗ ಬಲಿದಾನ ಬಳಿಕ ನಮ್ಮ ಪ್ರಭು ಶ್ರೀರಾಮ ಚಂದ್ರ ಇಂದು ಆಯೋಧ್ಯೆಗೆ ಆಗಮಿಸಿದ್ದಾನೆ ಎಂದು ನೆಮ್ಮದಿಯಿಂದ ಹೇಳಿದರು.
ನಮ್ಮ ರಾಮ ಲಲ್ಲಾ ಟೆಂಟ್ನಲ್ಲಿ ಇರುವುದಿಲ್ಲ. ನಮ್ಮ ರಾಮಲಲ್ಲಾ ಭವ್ಯ ರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಇಂದು ಪ್ರಾಣಪ್ರತಿಷ್ಠೆಯ ಅನುಭೂತಿ ವಿಶ್ವದ ಮೂಲೆ ಮೂಲೆಗೆ ತಲುಪಿದೆ ಎಂದು ಮೋದಿ ಹೇಳಿದರು.
1000 ವರ್ಷಗಳ ಬಳಿಕವೂ ಇಂದಿನ ದಿನಾಂಕವನ್ನೂ ಎಲ್ಲರೂ ನೆನಪಿಸುತ್ತಾರೆ. ಕಾರಣ ಈ ದಿನ ಪವಿತ್ರ ದಿನ, ದಿವ್ಯತೆಯ ಪರಿಪೂರ್ಣ ದಿನವಾಗಿದೆ. ಇದು ಸಾಮಾನ್ಯ ಸಮಯವಲ್ಲ. ಕಾಲಚಕ್ರದಲ್ಲಿ ಅಚ್ಚಳಿಯದೆ ಬರೆದ ದಿನವಾಗಿದೆ ಎಂದು ತಿಳಿಸಿದರು.
ಎಲ್ಲಿ ಶ್ರೀರಾಮ ಇದ್ದಾನೋ ಅಲ್ಲಿ ಹನುಮಾನ್ ಭಕ್ತಿ ಇದ್ದೇ ಇರುತ್ತದೆ, ಸೀತಾ ಮಾತಾ, ಲಕ್ಷ್ಣಣ ಸೇರಿದಂತೆ ಎಲ್ಲಾ ದೈವಿಯ ಗಮಸಂಭೂತರಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.
ಪ್ರಭುಶ್ರೀರಾಮನಲ್ಲಿ ಕ್ಷಮೆಯನ್ನೂ ಕೇಳುತ್ತೇನೆ. ಇಷ್ಟು ವರ್ಷ ಶ್ರೀರಾಮನ ಸೇವೆಯಲ್ಲಿ ನಮ್ಮಿಂದ ಏನಾದರೂ ಕಡಿಮೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಮೋದಿ ಹೇಳಿದರು.
ಇಂದು ಪ್ರಭು ಶ್ರೀರಾಮನ ನೋಡಿ ಆಯೋಧ್ಯೆ ಹಾಗೂ ಇಡೀ ದೇಶದ ನಾಗರೀಕರು ಸಂಸತದಲ್ಲಿ ತೇಲಾಡಿದ್ದಾರೆ
ಶ್ರೀರಾಮ 14 ವರ್ಷ ವನವಾಸ ಮಾಡಿದ್ದರು. ಆದರೆ ಶ್ರೀರಾಮನನ್ನು ಭವ್ಯ ರಾಮ ಮಂದಿರದಲ್ಲಿ ವಿರಾಜಮಾನಗೊಳಿಸಲು ಶತ ಶತಮಾನಗಳ ಕಾಲ ನಮ್ಮ ತಲೆ ತಲೆಮಾರುಗಳ ಹೋರಾಟ ನಡೆಸಿತು.
ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕವೂ ಶ್ರೀರಾಮನ ಹೋರಾಟ ನಡೆಯುತ್ತಲೇ ಇತ್ತು. ಶ್ರೀರಾನಮ ಅಸ್ಥಿತ್ವವನ್ನೇ ಪ್ರಶ್ನೆ ಮಾಡಲಾಗಿತ್ತು. ಕಾನೂನು ಹೋರಾಟ ನಡೆದಿತ್ತು. ಈ ವೇಳೆ ನ್ಯಾಯಪಾಲಿಕೆಗೆ ಗೌರವ ಸೂಚಿಸುತ್ತಿದ್ದೇನೆ ಎಂದು ಮೋದಿ ಸಂತಸದಿಂದ ನುಡಿದರು.
ರಾಮ ಭಕ್ತರು, ರಾಜ ಮಹಾರಾಜರು, ಸಾಧು ಸಂತರು, ಕರಸೇವಕರು, ಕೋಟಿ ಕೋಟಿ ಹಿಂದೂಗಳ ಹೋರಾಟಕ್ಕೆ ನಾನು ಚಿರಋಣಿಯಾಗಿದ್ದೇನೆ.
ಇಂದು ಭಾರತ ಭವ್ಯ ರಾಮ ಮಂದಿರ ನಿರ್ಮಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಿದೆ. ರಾಮ ಮಂದಿರ ಧೈರ್ಯ, ಶಾಂತಿ, ಸಮನ್ವಯದ ಪ್ರತೀಕವಾಗಿದೆ ಎಂದು ತಿಳಿಸಿದರು.
ರಾಮ ವಿವಾದವಲ್ಲ, ರಾಮ ಭಕ್ತಿಯ ಸಂಕೇತ, ರಾಮ ಎಲ್ಲರಿಗೂ ಸೇರಿದ ಆದರ್ಶ ಪುರುಷ. ಇದು ಕೇವಲ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠೆ, ಭಾರತೀಯ ಸಂಸ್ಕೃತಿಯ ಪ್ರತೀಕದ ಪ್ರಾಣಪ್ರತಿಷ್ಠೆಯಾಗಿದೆ.
ಇದು ಕೇವಲ ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ಭಾರತದ ದರ್ಶನದ ಮಂದಿರವಾಗಿದೆ ಎಂದು ಮೋದಿ ಬಣ್ಣಿಸಿದರು.
ರಾಮ ಭಾರತದ ವಿಚಾರ, ರಾಮ ಭಾರತ ವಿಕಾಸ, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಾಪ, ರಾಮ ಭಾರತದ ಪ್ರಭಾವ, ರಾಮ ನೀತಿಯೂ ಹೌದು, ನಿರಂತರತೆ ಹೌದು, ರಾಮ ವ್ಯಾಪಕವೂ ಹೌದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಮುಂದೇನು? ಈ ಸಂದರ್ಭದಲ್ಲಿ ಎಲ್ಲಾ ದೇವರು ನಮಗೆ ಆಶೀರ್ವಾದ ಮಾಡಲು ಸೇರಿದ್ದಾರೆ. ನಮ್ಮ ಅಂತಃಕರಣ ವಿಸ್ತಾರ ಮಾಡಬೇಕು, ದೇವರಿಂದ ದೇಶದ ತನಕ, ರಾಮನಿಂದ ರಾಷ್ಟ್ರದ ತನಕ ವಿಸ್ತರಿಸಬೇಕು. ಭಾರತದಲ್ಲಿ ಭಕ್ತಿ, ಸೇವೆ, ಸಮರ್ಪಣೆ ಭಾವ ಭಾರತದ ಆಧಾರವಾಗಿದೆ ಎಂದರು.
ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಕಳೆದ 11 ದಿನಗಳಿಂದ ವೃತಕೈಗೊಂಡಿದ್ದರು. ಬೆಳ್ಳಿ ಛಾತ್ರ ಹಾಗೂ ವಸ್ತ್ರ ಹಿಡಿದು ಗರ್ಭಗುಡಿ ಪ್ರವೇಶಿಸಿದ ಪ್ರಧಾನಿ, ಪ್ರಾಣಪ್ರತಿಷ್ಠೆ ಪೂಜಾಕೈಂಕರ್ಯದಲ್ಲಿ ಯಜಮಾನನ ಸ್ಥಾನ ವಹಿಸಿದರು.
ಕೇವಲ 84 ಸೆಕೆಂಡ್ ಗಳಲ್ಲಿ ರಾಮ ಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಿದ್ದು ಇತರ ವಿಧಿ ವಿಧಾನಗಳನ್ನು 12.55 ರೊಳಗೆ ಸಂಪೂರ್ಣ ಗೊಳಿಸಲಾಯಿತು.

