ಹಿರೇಮಗಳೂರು ಕಣ್ಣನ್ ಗೆ ನೀಡಿದ್ದ ನೋಟಿಸ್ ವಾಪಸ್ ಪಡೆದ ಸರ್ಕಾರ

ಚಿಕ್ಕಮಗಳೂರು: ವೇತನ ವಾಪಸು ಮಾಡುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿದ್ದ ನೋಟಿಸ್ ಅನ್ನು  ಸರ್ಕಾರ ವಾಪಸ್ ಪಡೆದಿದೆ.

ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಣ್ಣನ್‌ ಅವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತದೆ.

ಆದರೆ ದೇವಾಲಯದ ಆದಾಯ ಕಡಿಮೆ‌ ಇದೆ ಎಂದು ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ ವಾಪಸ್ ನೀಡುವಂತೆ  ತಹಶಿಲ್ದಾರ್ ಸುಮಂತ್ ನೋಟಿಸ್​ ನೀಡಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ನೀಡಲಾಗುತ್ತಿರುವ ವೇತನವನ್ನೂ ತಡೆಹಿಡಿಯಲಾಗಿದ್ದು,4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ​​ ಅವರಿಗೆ  ನೋಟಿಸ್​​ ನೀಡಲಾಗಿತ್ತು.

ಈ ಬಗ್ಗೆ ಸುದ್ದಿ ಹರಡಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ನೋಟೀಸ್ ವಾಪಸು ಪಡೆದಿದೆ.ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ನೋಟೀಸ್ ಕೊಟ್ಟಿದ್ದುದು ನಮ್ಮ ಗಮನಕ್ಕೆ ಬಂದಿರಲಿಲ್ಲ ಗೊತ್ತಾದ ತಕ್ಷಣ ನೋಟೀಸ್ ವಾಪಸು ಪಡೆಯುವಂತೆ‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.