ಉದ್ದೇಶ ಪೂರ್ವಕವಾಗಿ ನ್ಯಾಯಯಾತ್ರೆಗೆ ತಡೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಬಿಜೆಪಿಯವರು ನ್ಯಾಯ ಯಾತ್ರೆಗೆ ಉದ್ದೇಶ ಪೂರ್ವಕವಾಗಿಯೇ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ. ಇದು ಸಂವಿಧಾನಬಾಹಿರ ಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಿರಿಯಾಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೀಗೆಲ್ಲಾ ನಡೆದುಕೊಳ್ಳಬಾರದು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ತಡೆಯೊಡ್ಡಿರುವ ಅಸ್ಸಾಂ ಸರ್ಕಾರದ ನಡೆಯ ಬಗ್ಗೆ ಪ್ರಧಾನಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ನೀಡಿಲ್ಲ

ಪ್ರತಿ ನಾಗರಿಕನಿಗೂ ಪಾದಯಾತ್ರೆ ಕೈಗೊಳ್ಳಲು ಅಥವಾ ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ರಾಹುಲ್ ಗಾಂಧಿಯವರು ದೇಶದ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನೆಹರೂ ಕುಟುಂಬಕ್ಕೆ ಬೆದರಿಕೆಯಿದೆ, ಭಾರತ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರ ರಾಹುಲ್ ಗಾಂಧಿಯವರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿರುವುದು ಅವರ ಕರ್ತವ್ಯ ಎಂದು ಹೇಳಿದರು.

ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳು ಮೊದಲು ಕಾಂಗ್ರೆಸ್‍ನಲ್ಲಿದ್ದು, ನಂತರ ಬಿಜೆಪಿಗೆ ಹೋಗಿ ಮುಖ್ಯಮಂತ್ರಿಗಳಾಗಿದ್ದಾರೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರನ್ನು ಮೆಚ್ಚಿಸಲೆಂದು ಈ ರೀತಿ ಮಾಡುತ್ತಿದ್ದಾರೆ ಎಂದು ಸಿದ್ದು ಟೀಕಿಸಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆಯಲ:

ಜಗದೀಶ್ ಶೆಟ್ಟರ್ ಅವರು ಬಿಎಪಿಗೆ ಹಿಂತಿರುಗುವ ಬಗ್ಗೆ ಮಾತುಗಳು ಕೇಳಿ ಬಂದಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರೇ ನಾನು ಪುನ: ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಪದೇ ಪದೇ ಉದ್ದೇಶಪೂರ್ವಕವಾಗಿ ಬಿಜೆಪಿ ಈ ಮಾತನ್ನು ಹರಿಯಬಿಡುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಶೆಟ್ಟರ್ ಬಿಡುವುದಿಲ್ಲ ಎಂದು ಸಿಎಂ ಹೇಳಿದರು.

ಕೇಂದ್ರಕ್ಕೆ ಭೇಟಿ ನೀಡಿ ಅಮಿತ್ ಷಾ ಅವರನ್ನು ಭೇಟಿ ನೀಡಿದಾಗ ಡಿಸೆಂಬರ್ 23 ರಂದು ಸಭೆ ಕರೆದು ಪರಿಹಾರ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ಸಭೆ ಕರೆದು ಕಾರಣಾಂತರದಿಂದ ಮುಂದೂಡಿದರು.

ಇತ್ತೀಚೆಗೆ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿದಾಗ ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ರೈತರು ಬರಗಾಲದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ, ಕೂಡಲೇ ಬಿಡುಗಡೆ ಮಾಡಿ ಎಂದು ಅವರಿಗೆ ನೆನಪು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದುವರೆಗೆ ನಮ್ಮ ಸರ್ಕಾರ ದನಕರುಗಳಿಗೆ ಹಾಗೂ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ, ಜನರು ಗುಳೇ ಹೋಗದಂತೆ ನಿಭಾಯಿಸಿದೆ.

ಇನ್ನೊಂದು ವಾರದೊಳಗೆ ಎಲ್ಲಾ ರೈತರಿಗೂ ಮೊದಲನೇ ಕಂತನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ಎಂದು ‌ಸಿದ್ದರಾಮಯ್ಯ ಭರವಸೆ ನೀಡಿದರು.