ಬೆಂಗಳೂರು: ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತತೆ ಎಂದರೆ ಸಹಬಾಳ್ವೆ ಸಹಿಷ್ಣುತೆ ನಮಗೆ ಅದರಲ್ಲಿ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಆಯೋಜಿಸಿದ್ದ ಜಿ ಎಎಫ್ ಎಕ್ಸ್ (GAFX) ಸಮ್ಮಿಟ್ ನಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಬಿಜೆಪಿಯವರು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಭಗವಾಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ, ರಾಷ್ಟ್ರ ಧ್ವಜವನ್ನು ಹಾರಿಸಲು ಅವರು ಅನುಮತಿ ಪಡೆದಿದ್ದು ಅದನ್ನೇ ಹಾರಿಸಬೇಕತ್ತು ಆದರೆ ಅವರು ಹಾಗೆ ಮಾಡಿಲ್ಲ ಆದ್ದರಿಂದ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಜೆ ಡಿ ಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿಯವರು ಮಂಡ್ಯಕ್ಕೆ ಭೇಟಿ ನೀಡಿ ಪ್ರಚೋದನೆ ನೀಡುತ್ತಿದ್ದಾರೆ,ಏಕೆ ಹೀಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣೆ ಹತ್ತಿರ ಬರುತ್ತಿದೆ ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪಂಚಾಯತಿಯವರು ನೀಡಿದ್ದ ಅನುಮತಿಯಂತೆ ನಡೆದುಕೊಂಡಿದ್ದರೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಘೋಷಣೆ ಕೂಗುತ್ತಿರುವ ಬಗ್ಗೆ ಮಾತನಾಡಿ, ಅವರಿಗೆ ನನ್ನ ಬಗ್ಗೆ ಮಾತನಾಡಲು ಬೇರೆನಿದೆ, ಅದಕ್ಕೆ ಈ ರೀತಿ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

