ಗಾಂಧಿಯವರ ಆದರ್ಶದಲ್ಲಿ ನಡೆದು ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು -ಸಿಎಂ

ಬೆಂಗಳೂರು: ಎಲ್ಲಾ ಜಾತಿ ಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರು, ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದು ಅವರ ರಾಮರಾಜ್ಯದ ಪರಿಕಲ್ಪನೆಯಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಸರ್ವೋದಯ ದಿನಾಚರಣೆ ಪ್ರಯುಕ್ತ ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಹಾತ್ಮಾ ಗಾಂಧೀಜಿಯವರು1948ರ ಜನವರಿ 30 ರಂದು ಗೋಡ್ಸೆ ಯವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ದಿನ. ಗಾಂಧೀಜಿಯವರು ವಲ್ಲಭಾ ಬಾಯಿ ಪಟೇಲರೊಂದಿಗೆ ಸಂವಾದಿಸಿದ ನಂತರ ಭಜನೆಗೆ ತೆರಳಲು ಸ್ವಲ್ಪ ವಿಳಂಬವಾಗಿದ್ದ ಸಂದರ್ಭದಲ್ಲಿ ಹಂತಕ ಗೋಡ್ಸೆ, ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದ ಎಂದು ‌ಹೇಳಿದರು.

ಈ ದೇಶಕ್ಕೆ ಗಾಂಧೀಜಿಯವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಲಭಿಸಿತು. ಕಾಂಗ್ರೆಸ್ ನ ಬಹಳಷ್ಟು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.

ತಮ್ಮ ಕೊನೆಯುಸಿರೆಳೆದಾಗಲೂ ‘ಹೇ ರಾಮ್ ಎಂದು ಉಚ್ಛರಿಸಿದ್ದರು. ಶ್ರೀ ರಾಮನ ಬಗ್ಗೆ ಅಪಾರ ಭಕ್ತಿ, ನಂಬಿಕೆಯನ್ನು ಹೊಂದಿದ್ದರು. ಆದ್ದರಿಂದಲೇ ರಘುಪತಿ ರಾಘವ ರಾಜಾರಾಮ್ ಎಂಬುದು ಅವರ ನೆಚ್ಚಿನ ಭಜನೆಯಾಗಿತ್ತು ಎಂದು ಸಿಎಂ ಹೇಳಿದರು.

ಗಾಂಧಿಯವರ ಆದರ್ಶದಲ್ಲಿ ನಡೆದು ನಾವೆಲ್ಲರೂ ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ಸತ್ಯ ಅಹಿಂಸೆಯ ಹಾದಿಯನ್ನು ತೋರಿದ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೈದ ಗೋಡ್ಸೆಯನ್ನು ಪೂಜಿಸುವವರು ನಮ್ಮ ನಡುವೆ ಇದ್ದಾರೆ ಎಂದು ‌ವಿಷಾದಿಸಿದರು.

ರಾಜ್ಯದ ಜನತೆ ಹಾಗೂ ಸರ್ಕಾರದ ಪರವಾಗಿ ಮಹಾತ್ಮಾ ಗಾಂಧೀಜಿಯವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಗಾಂಧೀಜಿಯವರು ಶಾಂತಿ ಸಂದೇಶವನ್ನು ಸಾರಿದರು. ಇತ್ತೀಚೆಗೆ ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಸಂಗಗಳು ನಡೆಯುತ್ತಿವೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಗೋಡ್ಸೆಯ ಅನುಯಾಯಿಗಳು ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಶಾಂತಿ ಸಮಾಜದಲ್ಲಿ ನೆಲೆಸಬೇಕು. ಮನುಷ್ಯ ಮನುಷ್ಯರ ನಡುವೆ ವೈಷಮ್ಯ ಹೆಚ್ಚಿಸುವ ಕೆಲಸವಾಗಬಾರದು ಎಂದು ಸಿಎಂ ತಿಳಿಸಿದರು.

ಫೆಬ್ರವರಿ 8 ರಂದು ಮಂಡ್ಯ ಬಂದ್ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿಯವರು ಕರೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿ ಬಂದ್ ಮಾಡುವ ಅಥವಾ ಮಾಡದಿರುವ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಇವರೇ ಮುಚ್ಚಳಿಕೆ ಪತ್ರ ನೀಡಿ, ನಂತರ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿ, ತಮ್ಮ ಮುಚ್ಚಳಿಕೆಯನ್ನು ತಾವೇ ಉಲ್ಲಂಘನೆ ಮಾಡಿರುವುದು ತಪ್ಪು ಎಂದರು ಸಿದ್ದರಾಮಯ್ಯ.