ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮುರ್ಮು ಭಾಷಣ; ಸರ್ಕಾರದ ಸಾಧನೆ ತಿಳಿಸಿದ ರಾಷ್ಟ್ರಪತಿ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದು ಆರಂಭವಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನದ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಿದರು

ನಮ್ಮ ಸರ್ಕಾರ ಇಲ್ಲಿಯವರೆಗೆ ಅಭಿವೃದ್ಧಿಯಿಂದ ದೂರವಿದ್ದವರ ಬಗ್ಗೆ ಕಾಳಜಿ ವಹಿಸಿದೆ.

ಕಳೆದ 10 ವರ್ಷಗಳಲ್ಲಿ, ಸಾವಿರಾರು ಬುಡಕಟ್ಟು ಹಳ್ಳಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ತಲುಪಿಸಿದೆ.

ಲಕ್ಷಾಂತರ ಬುಡಕಟ್ಟು ಕುಟುಂಬಗಳು ಈಗ ಪೈಪ್‌ಲೈನ್‌ಗಳ ಮೂಲಕ ಶುದ್ಧ ನೀರನ್ನು ಪಡೆಯಲು ಪ್ರಾರಂಭಿಸಿವೆ.

ಕೇಂದ್ರ ಸರ್ಕಾರ ಸಾವಿರಾರು ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಿಗೆ 4G ಇಂಟರ್ನೆಟ್ ಸಂಪರ್ಕವನ್ನು ಒದಗಿಸಿದೆ. ಬುಡಕಟ್ಟು ಕುಟುಂಬಗಳಲ್ಲಿ, ಹಲವಾರು ತಲೆಮಾರುಗಳು ಸಿಕಲ್ ಸೆಲ್ ಅನೀಮಿಯಾದಿಂದ ಬಳಲುತ್ತಿದ್ದು ಅದಕ್ಕಾಗಿ ಪ್ರಥಮ ಬಾರಿಗೆ ರಾಷ್ಟ್ರೀಯ ಮಿಷನ್ ಆರಂಭಿಸಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷಗಳಲ್ಲಿ, ಜಗತ್ತು ಎರಡು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಿದೆ ಮತ್ತು ಕೊರೋನಾದಂತಹ ಸಾಂಕ್ರಾಮಿಕ ರೋಗವನ್ನು ಎದುರಿಸಿತು.

ಅಂತಹ ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತ ಸರ್ಕಾರವು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ ಎಂದು ಹೇಳಿದರು.

ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವು ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು ಎಂಬ ನಾಲ್ಕು ಬಲವಾದ ಸ್ತಂಭಗಳ ಮೇಲೆ ನಿಂತಿದೆ ಎಂದು ಸರ್ಕಾರ ನಂಬುತ್ತದೆ

ಕಳೆದ 10 ವರ್ಷಗಳಲ್ಲಿ, ದಶಕಗಳಿಂದ ದೇಶದ ಜನರು ಕಾಯುತ್ತಿದ್ದ ರಾಷ್ಟ್ರೀಯ ಹಿತಾಸಕ್ತಿಯ ಹಲವಾರು ಕಾರ್ಯಗಳನ್ನು ಭಾರತವು ಪೂರ್ಣಗೊಳಿಸಿದೆ.

ರಾಮಮಂದಿರ ನಿರ್ಮಾಣಕ್ಕೆ ಶತಮಾನಗಳಿಂದಲೂ ಕಾಯಲಾಗಿತ್ತು. ಇಂದು ಅದು ಪೂರ್ಣ ವಾಗಿದೆ. ಜಮ್ಮು-ಕಾಶ್ಮೀರದಿಂದ ಆರ್ಟಿಕಲ್ 370 ರದ್ದತಿ ಈಗ ಇತಿಹಾಸವಾಗಿದೆ

ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನಮ್ಮ ಶಕ್ತಿಯಾಗಿವೆ. ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನೆಯು1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ.

ಇಂದು ನಾವು ಕಾಣುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಕ್ರಮಗಳ ವಿಸ್ತರಣೆಯಾಗಿದೆ.

ನಮ್ಮ ಗಡಿಯಲ್ಲಿ ಸರ್ಕಾರ ಆಧುನಿಕ ಮೂಲ ಸೌಕರ್ಯಗಳನ್ನು ನಿರ್ಮಿಸುತ್ತಿದೆ. ನಮ್ಮ ಪಡೆಗಳು ಭಯೋತ್ಪಾದನೆ ಮತ್ತು ವಿಸ್ತರಣಾವಾದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಮತ್ತು ಸುರಕ್ಷತೆಯ ವಾತಾವರಣವಿದೆ. ನಕ್ಸಲ್ ಹಿಂಸಾಚಾರದ ಘಟನೆಗಳಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ‌ರಾಷ್ಟ್ರಪತಿ ಮುರ್ಮು ತಿಳಿಸಿದರು.