ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಗ್ಗೆ ತನಿಖೆ ಪ್ರಾರಂಭಿಸಿದ ತನಿಖಾ ಸಂಸ್ಥೆಗಳಿಗೆ ಹಲವು ಶಾಕಿಂಗ್ ಅಂಶಗಳು ಗೊತ್ತಾಗಿದೆ.
ಭಯೋತ್ಪಾದಕರು ಪಹಲ್ಗಾಮ್ ಜೊತೆಗೆ ಇನ್ನೂ ನಾಲ್ಕು ತಾಣಗಳನ್ನು ಟಾರ್ಗೆಟ್ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಏಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಘಟನೆಗೆ ಎರಡು ದಿನಗಳ ಮೊದಲೇ ಬೈಸರನ್ ಕಣಿವೆಯಲ್ಲಿ ಇದ್ದರೆಂದು ತನಿಖೆ ವೇಳೆ ತಿಳಿದು ಬಂದಿದೆ.
ಬೈಸರನ್ ವ್ಯಾಲಿಯಲ್ಲಿ ದಾಳಿಗೂ ಮುನ್ನ ಉಗ್ರರು ಪರಿಶೀಲನೆ ನಡೆಸಿದ್ದರು. ದಾಳಿಗೆ ಪಕ್ಕಾ ಪ್ಲ್ಯಾನ್ ಮಾಡಿದ್ದರು ಎಂಬ ವಿಚಾರವನ್ನು ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್ ಗಳಲ್ಲಿ ಒಬ್ಬ ಸ್ಥಳೀಯ ಬಾಯ್ಬಿಟ್ಟಿದ್ದಾನೆ ಈತ ಉಗ್ರರಿಗೆ ಸಹಾಯ ಮಾಡಿದ್ದರಿಂದ ಬಂದನಕ್ಕೊಳಗಾಗಿದ್ದಾನೆ.
ಉಗ್ರರು ಪಹಲ್ಗಾಮ್ ಬೈಸರನ್ ವ್ಯಾಲಿ ಜೊತೆಗೆ ಅರು ವ್ಯಾಲಿ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿ ಯನ್ನೂ ದಾಳಿಗೆ ಗುರಿಯಾಗಿಸಿದ್ದರು. ಆದರೆ, ಪಹಲ್ಗಾಮ್‌ನಲ್ಲಿ ಮಾತ್ರ ದಾಳಿ ಮಾಡಿದ್ದಾರೆ.
ಇದಕ್ಕೆ ಕಾರಣ ಪಹಲ್ಗಾಮ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಗಿ ಭದ್ರತೆ ಇದ್ದುದು. ನಾಲ್ವರು ಸ್ಥಳೀಯರಿಂದ ಉಗ್ರರಿಗೆ ಸಹಾಯ ಸಿಕ್ಕಿತ್ತು. ಲಾಜಿಸ್ಟಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಸ್ಥಳೀಯ 20 ಮಂದಿ ಉಗ್ರರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರನ್ನು ಬಂಧಿಸಿರುವ ಎನ್‌ಐಎ ಇನ್ನೂ ಕೆಲ ಶಂಕಿತರ ಮೇಲೆ ಕಣ್ಣಿರಿಸಿದೆ. ದಾಳಿಗೂ ಮುನ್ನ ಈ ಏರಿಯಾದಲ್ಲಿ ಮೂರು ಸ್ಯಾಟಲೈಟ್ ಫೋನ್‌ಗಳ ಬಳಕೆಯಾಗಿವೆ. ಇದರಲ್ಲಿ 2 ಫೋನ್‌ಗಳ ಸಿಗ್ನಲ್ ಟ್ರೇಸ್ ಮಾಡುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.