ಸ್ತ್ರೀರೋಗ ತಜ್ಞೆ ಡಾ.ರೇಣುಕಾ ದೇವಿ ಅಮಾನತು

ಚಾಮರಾಜನಗರ: ತಾಲ್ಲೂಕಿನ ಸಂತೆಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರೇಣುಕಾ ದೇವಿ ಸಿ.ಎನ್ ಅವರನ್ನು ‌ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಕರ್ತವ್ಯ ಲೋಪದ ಆರೋಪದ ಮೇರೆಗೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಂತೆಮರಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯ ರಿಂದ ಹಣ ಪಡೆಯುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಿದ್ಯುನ್ಮಾನ ವಾಹಿನಿಗಳಲ್ಲಿ ವಿಡಿಯೋ ಬಿತ್ತರವಾಗಿತ್ತು. ಈ ಪ್ರಕರಣ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯ ಮುಖ್ಯಾಂಶಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಪವಿತ್ರ ಮತ್ತು ಆಶಾ ಕಾರ್ಯಕರ್ತೆಯರು ಈ ವೈದ್ಯರ ನಿರ್ದೇಶನದಂತೆ ರೋಗಿಗಳಿಂದ ಮತ್ತು ಫಲಾನುಭವಿಗಳಿಂದ ಹಣ ಪಡೆಯುತ್ತಿರುವುದು ಸರ್ಕಾರಿ ಅಧಿಕಾರಿ ಜವಾಬ್ದಾರಿಯುತ ನಡವಳಿಕೆಗೆ ವಿರುದ್ಧವಾಗಿದೆ ಎಂದೂ ವರದಿ ಮಾಡಲಾಗಿದೆ.

ವೈದ್ಯರು ಈ ಆಸ್ಪತ್ರೆಯಲ್ಲಿ ವರದಿ ಮಾಡಿಕೊಂಡ ನಂತರದಿಂದ ಆಸ್ಪತ್ರೆಯ ಪ್ರಗತಿ ಕುಂಠಿತವಾಗಿರುವುದು ಕರ್ತವ್ಯ ಲೋಪ ಮತ್ತು ಕರ್ತವ್ಯ ನಿರ್ಲಕ್ಷತೆಗೆ ಸಮಾನವಾಗಿದೆ ಎಂದು ಹೇಳಲಾಗಿದೆ.

ಶ್ರುಶೋಷಾಧಿಕಾರಿ ಮತ್ತು ಆಶಾ ಕಾರ್ಯಕರ್ತೆಯರು ಒಂದು ತಂಡವಾಗಿ ಸರ್ಕಾರಿ ವ್ಯವಸ್ಥೆಯನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗ ಮಾಡಿಕೊಂಡು ಕರ್ತವ್ಯ ಲೋಪ ಮತ್ತು ದುರ್ವತ್ರನೆ ತೋರಿರುತ್ತಾರೆ‌ ಎಂದು ದೂರಲಾಗಿದೆ.

ಇವರು ಸರ್ಕಾರದ ಜವಾಬ್ದಾರಿಯುತ್ತ ಸಾರ್ವಜನಿಕ ಸೇವೆಯ ಹುದ್ದೆಯಲ್ಲಿದ್ದು ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುವ ಬದಲು ಸಾರ್ವಜನಿಕರಿಂದ ಹಣ ಪಡೆಯುವ ಪ್ರವೃತ್ತಿ ಉಳ್ಳವರಾಗಿದ್ದಾರೆ, ಸಹ ವೈದ್ಯರು ಮತ್ತು ಅಧೀನ ಸಿಬ್ಬಂದಿಗಳೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳದೆ ಕರ್ತವಲೋಪ ಎಸಗಿದ್ದಾರೆ

ಈ ಎಲ್ಲಾ ವರದಿಯ ಮುಖ್ಯಾಂಶಗಳಿಂದ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರೇಣುಕಾದೇವಿ ಅವರು ಕರ್ತವ್ಯ ಲೋಪ ಮತ್ತು ಕರ್ತವ್ಯ ನಿರ್ಲಕ್ಷ ತೋರಿರುವ ಗಂಭೀರ ಆರೋಪಗಳು ಮೇಲ್ನೋಟಕ್ಕೆ ಕಂಡು ಬಂದಿದ್ದು ವೈದ್ಯರ ಆಡಳಿತ ಕಾರ್ಯಕ್ಷಮತೆಗೆ ಧಕ್ಕೆ ಉಂಟು ಮಾಡಿರುತ್ತದೆ.

ಆದ್ದರಿಂದ ನ್ಯಾಯ ಸಮ್ಮತ ಪಕ್ಷಪಾತ ರಹಿತ ಇಲಾಖಾ ವಿಚಾರಣೆ ನಡೆಸಲು ಹಾಗೂ ದಾಖಲೆಗಳನ್ನು ತಿದ್ದುವ ಅಥವಾ ಸಾಕ್ಷಿದಾರರನ್ನು ಪ್ರಭಾವಿತಗೊಳಿಸುವಿಕೆಯಂತಹ ಯಾವುದೇ ಅಡಚಣೆ ಆಗದಂತೆ ತಡೆಯುವ ಉದ್ದೇಶದಿಂದ ಸಂತೆಮರಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರೇಣುಕಾದೇವಿ ಸಿ.ಎನ್. ಅವರನ್ನು ತಕ್ಷಣದಿಂದ ಅಮಾನತ್ತುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಶಿಸ್ತು ಪ್ರಾಧಿಕಾರ ಮತ್ತು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಅವರು ಆದೇಶ ಹೊರಡಿಸಿದ್ದಾರೆ.