ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶ್ವದಲ್ಲೇ ಪ್ರಪ್ರಥಮ ಸಹಸ್ರ ಚಂಡೀಯಾಗ

ಮೈಸೂರು: ಇಡೀ ವಿಶ್ವದಲ್ಲಿ ಮೈಸೂರಿನ ಅವಧೂತ ದತ್ತಪೀಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಚಂಡೀಯಾಗ ಮತ್ತು ಅತಿ ಶ್ರೇಷ್ಠವಾದ ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ.

ಅವಧೂತ ದತ್ತಪೀಠದ ಶುಖ ವನದ ಬಳಿ‌ ಮಾಧ್ಯಮ ಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಾಳೆ ಶುಕ್ರವಾರ ದುರ್ಗಾದೇವಿಯ ಪ್ರಾರ್ಥನೆಯೊಂದಿಗೆ ಚಂಡೀಯಾಗ ಪ್ರಾರಂಭವಾಗಲಿದೆ ಎಂದು ಹೇಳಿದರು.

ಹಿಂದೆ ಮಹಾಭಾರತದ ಕಾಲದಲ್ಲಿ ಇಂತಹ ಸಹಸ್ರ ಚಂಡಿ ಯಾಗ ನಡೆದಿತ್ತು,ಅದು ಹೊರತುಪಡಿಸಿ ಪ್ರಪಂಚದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ಆಶ್ರಮದಲ್ಲಿ ನಡೆಯುತ್ತಿದೆ,ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ನಮ್ಮ ದೇಶ, ಕರ್ನಾಟಕ ಮತ್ತು ಇಡೀ ಜಗತ್ತಿಗೆ ಒಳಿತಾಗಲಿ,ಜನರು ಉನ್ನತಿಗೆ ಹೋಗಬೇಕು,ಕಷ್ಟ ಕೋಟಲೆಗಳು ತೊಲಗಬೇಕು,ಆರೋಗ್ಯ ಪ್ರಾಪ್ತಿಯಾಗಬೇಕು ,ಶಾಂತಿ ನೆಮ್ಮದಿ ಸಿಗಬೇಕೆಂದು ಸಂಕಲ್ಪ ಮಾಡಿ ಇಂತಹ ಒಂದು ಶ್ರೇಷ್ಟವಾದ‌ ಚಂಡೀ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಯಾವುದೇ ಜಾತಿ,ಧರ್ಮ,ಲಿಂಗ ಭೇದವಿಲ್ಲದೆ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.

11 ಹೋಮ ಕುಂಡಗಳಲ್ಲಿ 10 ದಿನಗಳ ಕಾಲ ಸಹಸ್ರ ಚಂಡೀಯಾಗ ನಡೆಯಲಿದೆ ಎಂದು ಹೇಳಿದರು.

ಚಂಡೀಯಾಗದ ಜೊತೆಜೊತೆಗೆ ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞ ನಡೆಯಲಿದೆ‌, ವಿಶ್ವ ಶಾಂತಿ ಹಾಗೂ ಪರಿಸರ ಸಮತೋಲನಕ್ಕಾಗಿ 8,000 ಬೋನ್ಸಾಯ್ ವೃಕ್ಷಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ‌ ಎಂದು ಸ್ವಾಮೀಜಿ ತಿಳಿಸಿದರು.

ಇಂದಿನ ಮಕ್ಕಳಿಗೆ ಕೆಲವು ಗಿಡ ಮರಗಳ ಪರಿಚಯ ಬಿಟ್ಟರೆ ಅಮೂಲ್ಯ ವೃಕ್ಷಗಳು ಗೊತ್ತಿಲ್ಲ, ನಕ್ಷತ್ರ ವೃಕ್ಷ, ನವಗ್ರಹ ವೃಕ್ಷಗಳು ಗೊತ್ತಿಲ್ಲ,ಅದಕ್ಕಾಗಿ ಒಂದು ವೃಕ್ಷದ ಮ್ಯೂಸಿಯಂ ಮಾಡಬೇಕು ಎಂಬ ಮಹಾದಾಸೆ ಇತ್ತು. ಅದಕ್ಕೋಸ್ಕರ ತೈವಾನ್, ಇಂಗ್ಲೆಂಡ್, ಜಪಾನ್ ಮತ್ತಿತರ ದೇಶಗಳಿಂದ ಅಮೂಲ್ಯ ಗಿಡಗಳನ್ನು ತರಿಸಿದ್ದೇವೆ, ವೃಕ್ಷ ಶಾಂತಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.

ಬರಿ ವೃಕ್ಷಗಳನ್ನು ತರಿಸುವುದಷ್ಟೇ ಅಲ್ಲ ತೆಲಂಗಾಣ, ಆಂಧ್ರ, ತಮಿಳುನಾಡು ಕರ್ನಾಟಕ ಸೇರಿದಂತೆ ಎಲ್ಲೆಲ್ಲಿ ಜಮೀನು ಲಭ್ಯವಿದೆಯೋ ಅಲ್ಲಿ ಜಮೀನು ಖರೀದಿಸಿ, ವೃಕ್ಷಗಳನ್ನು ಬೆಳೆಸುವ ಏರ್ಪಾಟು ಮಾಡಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಅತ್ಯಮೂಲ್ಯ ಗಿಡಗಳುಳ್ಳ ಪಂಚ ಮೂಲಿಕ ವನವನ್ನು ಹೊಸದಾಗಿ ಮಾಡಲಾಗಿದೆ ಅದಕ್ಕಾಗಿ ಸಾಹಸ್ರಾರು ಬೊನ್ಸಾಯ್ ವೃಕ್ಷಗಳನ್ನು ಸೇರಿಸಲಾಗಿದೆ ಅದು ಸಂಜೆ ಉದ್ಘಾಟನೆಗೊಳಲಿದೆ.

ಈ ಪಂಚಮೂಲಿಕ ವನದಲ್ಲಿ ನಾವ್ಯಾರೂ ನೋಡಿರದ ಸಹಸ್ರ, ಸಹಸ್ರ ಗಿಡಗಳನ್ನು ತಂದು ಸೇರಿಸಲಾಗಿದೆ ಪೂಜೆಗೆ ಅತ್ಯುತ್ಕೃಷ್ಟವಾದ ಗಿಡಮರಗಳು ಇವೆ,ಸಂಜೀವಿನಿಯಂತಹ ಅತ್ಯಮೂಲ್ಯ ವೃಕ್ಷ, ಬೇವು,ಆಲ, ನೆಲ್ಲಿ ವಟವೃಕ್ಷ ಹೀಗೆ ಅನೇಕ ವೃಕ್ಷಗಳನ್ನು ಸಂರಕ್ಷಿಸಲಾಗುತ್ತಿದೆ‌.

ಯಾಗದ ಸಂದರ್ಭದಲ್ಲಿ ಪ್ರತಿ 1000 ವೃಕ್ಷಗಳ ಸಮೂಹವನ್ನು ಎಂಟು ವಿವಿಧ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಗಣಪತಿ, ವಿಷ್ಣು, ಲಲಿತಾ, ಶಿವ, ಸುಬ್ರಹ್ಮಣ್ಯ, ದತ್ತಾತ್ರೇಯ, ಹನುಮಂತ ಮತ್ತು ಸೂರ್ಯದೇವ – ಈ ಎಂಟು ದೇವತೆಗಳ ಸಹಸ್ರನಾಮದ ಪವಿತ್ರ ನಾಮಗಳನ್ನು ಪ್ರತಿಯೊಂದು ವೃಕ್ಷಕ್ಕೂ ಹೆಸರಿಸಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.

ನಮ್ಮ ಆಶ್ರಮ ಆಧ್ಯಾತ್ಮದ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ತೊಡಗಿದೆ ನಮ್ಮ ಎಲ್ಲಾ ದೇವಾಲಯಗಳಲ್ಲಿ ಮಂಗಳಾರತಿಯಿಂದ ಬರುವ ಪ್ರತಿಯೊಂದು ಪೈಸೆಯನ್ನು ನೆರೆ,ಬರ ಮತ್ತಿತರ ಅವಘಡಗಳಲ್ಲಿ ಸಂತ್ರಸ್ತರಾದವರಿಗೆ ಸಮರ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದೆಲ್ಲದರ ಜೊತೆಗೆ ಭಗವದ್ಗೀತೆ ಕಂಠಪಾಠ ಮಾಡಿಸಲಾಗುತ್ತದೆ, ಭಗವದ್ಗೀತೆ ಓದುವುದರಿಂದ ಮಾನಸಿಕ ಖಿನ್ನತೆ ದೂರವಾಗಲಿದೆ ಮನುಷ್ಯನ ಜೀವನ ಸುಧಾರಿಸಲಿದೆ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ನುಡಿದರು.

ನಿನ್ನೆಯ ಅವಘಡ ಕುರಿತು ಮಾತನಾಡಿದ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು,ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ವಿಜಯೋತ್ಸವ ಸಂಭ್ರಮದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟಿರುವುದಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದರು.

ಇತ್ತೀಚೆಗೆ ಇಂತಹ ಕಾಲ್ತುಳಿತಗಳು ಹೆಚ್ಚಾಗುತ್ತಿದೆ, ತಿರುಪತಿಯಲ್ಲಿ, ಪ್ರಯಾಗ್ ರಾಜ್ ನಲ್ಲಿ ಹೀಗೆ ಆಗಿತ್ತು. ಇದೀಗ ಬೆಂಗಳೂರಿನಲ್ಲೂ ಆಗಿದೆ, ಇದೆಲ್ಲದಕ್ಕೂ ನಮ್ಮ ಜನರಲ್ಲಿ ಶಿಸ್ತು,ಸಂಯಮ ಇಲ್ಲದಿರುವುದು ಮುಖ್ಯ ಕಾರಣ ಎಂದು ಸ್ವಾಮೀಜಿ ವಿಷಾದಿಸಿದರು.