ಭಾರತ ಜಗತ್ತಿನಲ್ಲಿ ನಂಬರ್ ಒನ್ ದೇಶ ಆಗಬೇಕು:ಪ್ರಹ್ಲಾದ‌ ಜೋಶಿ

ಮೈಸೂರು: ಭಾರತ ಜಗತ್ತಿನಲ್ಲಿ ನಂಬರ್ ಒನ್ ದೇಶ ಆಗಬೇಕೆಂದು ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ ಅವರು ಆಶಿಸಿದರು.

ಅವಧೂತದತ್ತ ಪೀಠದಲ್ಲಿ ಇಂದಿನಿಂದ ಪ್ರಾರಂಭವಾಗಿರುವ ವಿಶ್ವದ ಮೊಟ್ಟಮೊದಲ ಸಹಸ್ರ ಚಂಡಿ ಯಾಗ ಮತ್ತು ವನದುರ್ಗ ವೃಕ್ಷ ಶಾಂತಿ ಮಹಾಯಜ್ಞ ಪುಜಾ ಕಾರ್ಯದಲ್ಲಿ ಭಾಗವಹಿಸಿದ ನಂತರ ಅವರು ಮಾತನಾಡಿದರು.

ಅನೇಕ ವಿಷಯದಲ್ಲಿ ಭಾರತ ಜಗತ್ತಿನಲ್ಲಿ ಈಗ ನಾಲ್ಕನೇ ಸ್ಥಾನದಲ್ಲಿದೆ,ಆರ್ಥಿಕ ವಿಷಯದಲ್ಲೂ 4ನೆ ಸ್ಥಾನಕ್ಕೆ ಬಂದಿದ್ದೇವೆ,ನಮ್ಮ ದೇಶ ನಂಬರ್ ಒನ್ ಸ್ಥಾನಕ್ಕೆ ಬರಬೇಕು,ಅದಕ್ಕಾಗಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಶಾಂತಿ ನೆಮ್ಮದಿ ಮತ್ತು ಸೃಷ್ಟಿಯ ಜೊತೆಗೆ ಸಮತೋಲನ ಇರಬೇಕು ಹಾಗಾಗಿ ದೇಶ ಬಲಾಡ್ಯ ಆಗಬೇಕು ಎಂದು ಜೋಶಿ ಅಭಿಪ್ರಾಯ ಪಟ್ಟರು.

ಗಣಪತಿ ಶ್ರೀಗಳು 14 ದಿನಗಳ ಕಾಲ ಸಹಸ್ರ ಚಂಡಿ ಆಗ ಮತ್ತು ವನದುರ್ಗ ವೃಕ್ಷ ಶಾಂತಿ ಮಹಾ ಯಜ್ಞವನ್ನು ನಮ್ಮೆಲ್ಲರ ಮನಸ್ಸಿಗೆ ನಾಟುವಂತೆ, ಭಕ್ತಿಯ ಭಾವ ವೃದ್ದಿಯಾಗುವಂತೆ ಆಧ್ಯಾತ್ಮಿಕ ಮನಸ್ಸು ಉದ್ದೀಪನ ಆಗುವಂತೆ ಈ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಒಂಬತ್ತು ಸಾವಿರ ಪೂಜನೀಯ ವೃಕ್ಷಗಳಿಂದ ಪೂಜೆ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಡೀ ಜಗತ್ತಿನಲ್ಲಿ ಕಾಡು ಮತ್ತು ಗಿಡಗಳು ಕಡಿಮೆಯಾಗುತ್ತಿದೆ ಆದರೆ ನಮ್ಮ ಭಾರತ ದೇಶದಲ್ಲಿ ಕಳೆದ 11 ವರ್ಷಗಳಲ್ಲಿ ಶೇ 17ರಷ್ಟು ಕಾಡು ವೃದ್ಧಿಯಾಗಿದೆ, ಇದಕ್ಕೆ ನಿಜವಾದ ಮೂಲಭೂತ ಕಾರಣ ಎಂದರೆ ಆಧ್ಯಾತ್ಮ ಭಕ್ತಿ, ದೇವರ ಮೇಲೆ ನಮ್ಮ ನಂಬಿಕೆ, ಸ್ವಾಮೀಜಿಯವರು ಮಾಡುತ್ತಿರುವ ಇಂತಹ ಚಂಡಿಯಾಗ.

ಈ ಮೂಲಕ ಸೃಷ್ಟಿಯನ್ನು ಸಂರಕ್ಷಿಸಬೇಕು ಎಂದು ಗಣಪತಿ ಸ್ವಾಮೀಜಿಯವರು ಸಂದೇಶ ಕೊಟ್ಟಿದ್ದಾರೆ, ಇಂತಹ ಪುಣ್ಯ ಮತ್ತು ಪವಿತ್ರ ಕಾರ್ಯದಲ್ಲಿ ನನಗೆ ಅನಿರೀಕ್ಷಿತವಾಗಿ ಭಾಗವಹಿಸುವ ಲಾಭ ಸಿಕ್ಕಿದೆ ಅದಕ್ಕಾಗಿ ಗಣಪತಿ ಸ್ವಾಮೀಜಿಯವರು ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ಶ್ರೀಗಳಿಗೆ ನಾನು ಭಕ್ತಿ ಪೂರ್ವಕವಾಗಿ ನಮಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಭಾರತದ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಎಲ್ಲಾ ಚರಾಚರ ವಸ್ತುಗಳಲ್ಲಿ ದೇವರನ್ನು ಕಾಣುವ ಪವಿತ್ರತೆ ಇರುವುದು ಎಂದರೆ ಅದು ನಮ್ಮ ಹಿಂದೂ ಧರ್ಮದಲ್ಲಿ ಮಾತ್ರ ಎಂದು ಜೋಶಿ ಹೇಳಿದರು.

ಇಡೀ ಜಗತ್ತಿನಲ್ಲಿ ಈಗ ಕೂಗು ಕೇಳುತ್ತಿದೆ ಕೇವಲ ಭಾರತದಲ್ಲಿ ಮಾತ್ರ ಸೃಷ್ಟಿಯ ಜೊತೆ ತದಾತ್ಮತೆ ಮತ್ತು ಸೃಷ್ಟಿಯ ಜೊತೆಗೆ ಬದುಕಬೇಕು, ಸೃಷ್ಟಿ ನಿಮಗೆ ಅಗತ್ಯವಿರುವ ಎಲ್ಲವನ್ನು ಕೊಡುತ್ತದೆ ಆಸೆಯನ್ನು ಪೂರೈಸುತ್ತದೆ ದುರಾಸೆಯನ್ನು ದೂರ ಇಡುತ್ತದೆ ಎಂದು ಭಾವಿಸಿ ನಡೆದುಕೊಳ್ಳುವುದು ಅಂದರೆ ಅದು ನಮ್ಮ ಭಾರತದ ಸಂಸ್ಕೃತಿಯಲ್ಲಿ ಮಾತ್ರ ಸಾಧ್ಯ ಎಂದು ಜೋಶಿ ಹೇಳಿದರು.

ಶ್ರೀ ಗಣಪತಿ ಸ್ವಾಮೀಜಿಯವರು ಪ್ರಹ್ಲಾದ ಜೋಶಿ ಮತ್ತು ಶಾಸಕ ಟಿ.ಎಸ್.ಶ್ರೀವತ್ಸ ಅವರ ಕೈನಿಂದಲೇ ಹೋಮ ಕಾರ್ಯ ಮಾಡಿಸಿದ್ದು ವಿಶೇಷವಾಗಿತ್ತು.

ಬೆಳಗ್ಗೆ ಏಳು ಗಂಟೆಗೆ ಅವಧೂತ ದತ್ತಪೀಠದ ಆವರಣದಲ್ಲಿ 11 ಹೋಮ ಕುಂಡಗಳಲ್ಲಿ ಸಹಸ್ರ ಚಂಡಿ ಯಾಗ ಪ್ರಾರಂಭವಾಯಿತು.
ಇದರ ಜತೆಗೆ ರುದ್ರ ಹೋಮ ಕೂಡಾ ನೆರವೇರಿತು.ನಂತರ ಭಕ್ತಾದಿಗಳಿಂದ ಸೌಂದರ್ಯ ಲಹರಿ ಮತ್ತು ಲಲಿತಾ ಸಹಸ್ರನಾಮ ಕೂಡ ನಡೆಯಿತು.

ಇಂದಿನ ಚಡಿಯಾಗ ಪೂಜಾ ಕಾರ್ಯದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಸಿಇಒ ವಿಶ್ವಭೂಷಣ್ ಮಿಶ್ರ ಕೂಡ ಪಾಲ್ಗೊಂಡಿದ್ದರು.

ಪ್ರಹ್ಲಾದ ಜೋಶಿಯವರೊಂದಿಗೆ ಶಾಸಕ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಮತ್ತು ಜೋಗಿ ಮಂಜು ಮತ್ತಿತರರು ಹಾಜರಿದ್ದರು.