ಮೈಸೂರು: ಐಪಿಎಲ್ ಕಪ್ ವಿಜೇತ ಆರ್‌ಸಿಬಿ ತಂಡಕ್ಕೆ ಸರ್ಕಾರ ಅಭಿನಂದನಾ ಸಮಾರಂಭ ಏರ್ಪಡಿಸಿ ಸೂಕ್ತ ನಿರ್ವಹಣೆ ಮಾಡದೇ 11 ಜನರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಘೋರ ದುರಂತ ಎಂದು ಮೈಸೂರು ಹಿಂದೂಪರ ಸಂಘಟನೆಗಳ ಒಕ್ಕೂಟ ಹೇಳಿದೆ.
ಮೈಸೂರು ಪ್ರೆಸ್ ಕ್ಲಬ್ ನಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೈ.ಕಾ. ಪ್ರೇಮ್ ಕುಮಾರ್ ಸಹ-ಸಂಚಾಲಕರಾದ ಸಂಜಯ್, ರಾಕೇಶ್ ಭಟ್ ಹಾಗೂ ಎಸ್. ತ್ಯಾಗರಾಜ್ ಈ ಬಗ್ಗೆ ಮಾತನಾಡಿದರು.
ಸರ್ಕಾರ ತನ್ನ ತಪ್ಪನ್ನು ಮರೆಮಾಚಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಿ, ಅಸಂಬದ್ಧ ವ್ಯಕ್ತಿಗಳ ಮೇಲೆ ಮೊಕದ್ದಮೆ ದಾಖಲಿಸಿ, ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ತನ್ನ ತಪ್ಪಿನಿಂದ ಪಲಾಯನ ಮಾಡುತ್ತಿದೆ ಎಂದು ದೂರಿದರು.
ಅಮಾನತು ಗೊಂಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಹಾಗೂ ಡಿಸಿಪಿ ಶೇಖರ್ ಅವರು ಮೈಸೂರು ನಗರದಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೆ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎಲ್ಲೆಡೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದವರು ಎಂದು ಹೇಳಿದರು.
ಮೈಸೂರಿನ ಕ್ಯಾತಮಾರನಹಳ್ಳಿಯ ಆರ್ ಎಸ್ ಎಸ್ ರಾಜು ಹತ್ಯೆಯಾದಾಗ ಹಂತಕರನ್ನು ಕಂಡುಹಿಡಿಯಲು ತುಂಬಾ ಶ್ರಮಿಸಿದಂತವರು ಅಂದಿನ ಮೈಸೂರು ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರು.
ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಅಂದು ನೂರಕ್ಕೂ ಹೆಚ್ಚು ದಿನಗಳು ನಿರಂತರವಾಗಿ ಪ್ರತಿಭಟನೆ ನಡೆಸಿ ಹಂತಕರ ಬಂಧನಕ್ಕೆ ಒತ್ತಾಯ ಮಾಡಿದ್ದೆವು. ಆ ಸಂದರ್ಭ ನಿತ್ಯ ಪೊಲೀಸರ ಮೇಲೆ ಒತ್ತಡ ಹಾಕುತ್ತಾ ಬಂದಿದ್ದೆವು, ಹಂತಕರ ಬಂಧನದ ನಂತರ ತಾವೇ ಹೇಳಿಕೆ ನೀಡಿ ತಮ್ಮನ್ನು ಜರಿದಿದ್ದ ಹಿಂದೂಪರ ಸಂಘಟನೆಗಳ ಒಕ್ಕೂಟದ ಕೆಲಸವನ್ನು ಶ್ಲಾಘಿಸಿದ್ದರು. ರಾಜು ಹತ್ಯೆಯ ನಂತರ ದಿಗ್ಬ್ರಮೆಗೊಳಗಾಗಿದ್ದ ಮೈಸೂರಿನಲ್ಲಿ, ಅಂತಹ ಕೋಮು ಸೂಕ್ಷ್ಮ ಸನ್ನಿವೇಶವನ್ನು ಸೂಕ್ತವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿದ್ದರು ದಯಾನಂದ್ ಎಂದು ವಿವರಿಸಿದರು.
ಡಿಸಿಪಿಯಾಗಿದ್ದ ಶೇಖರ್ ಅವರು ಕೂಡ ಜನಸಾಮಾನ್ಯರ ದೂರಿಗೆ ಸ್ಪಂದಿಸುತ್ತಿದ್ದರು, ಸಂಘ-ಸಂಸ್ಥೆಗಳ ಮನವಿಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಈ ಇಬ್ಬರು ಅಧಿಕಾರಿಗಳ ಕೆಲಸವನ್ನು ಗಮನಿಸಿಯೇ ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಇವರಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿದ್ದರು. ಅದರಲ್ಲಿಯೂ ಸಿದ್ದರಾಮಯ್ಯನವರು ‘ಅಹಿಂದ’ ಪರ ಎಂದು ಎಲ್ಲೆಡೆ ಹೇಳಿಕೊಳ್ಳುವವರು, ಆದರೆ ಇಂದು ಹಿಂದುಳಿದ ವರ್ಗದ ಅಧಿಕಾರಿಗಳ ಪರ ನಿಲ್ಲದೇ, ಅತ್ಯಂತ ಕೆಟ್ಟ ರೀತಿಯಲ್ಲಿ ಅವರನ್ನು ಅಮಾನತ್ತು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ಇಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಹಿಂದೂಪರ ಸಂಘಟನೆಗಳ ಒಕ್ಕೂಟವು ತೀವ್ರವಾಗಿ ಖಂಡಿಸುತ್ತವೆ ಎಂದು ರಾಕೇಶ್ ಭಟ್ ತಿಳಿಸಿದರು.
ಮುಖ್ಯಮಂತ್ರಿಗಳು ಕನಿಷ್ಠ ಒಂದು ಗಂಟೆಯಾದರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಅಮಾನತ್ತು ಆದೇಶವನ್ನು ಹಿಂಪಡೆಯಬೇಕು ಮತ್ತು ಇಂತಹ ದಕ್ಷ ಅಧಿಕಾರಿಗಳಿಗೆ ಮತ್ತಷ್ಟು ಉತ್ತಮವಾದ ಜವಾಬ್ದಾರಿ ನೀಡಬೇಕು ಎಂದು ಹಿಂದೂಪರ ಸಂಘಟನೆಗಳ ಒಕ್ಕೂಟದವರು ಆಗ್ರಹಿಸಿದರು.