ಮೈಸೂರು: ಮೈಸೂರಿನಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಸುವಾಸನೆ ಗಮಗಮಿಸುತ್ತಿರುವಾಗಲೇ, ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ನಗರದಲ್ಲಿ ಕಳೆದ ಕೆಲ ದಿನಗಳಿಂದ ಎತ್ತ ಕಡೆ ನೋಡಿದರು ಕೇವಲ ಹಣ್ಣಿನ ರಾಜ ಮಾವು ಕಾಣಸಿಗುತ್ತಿತ್ತು. ಆದರೆ ಈಗ ಮಾವಿನ ಜಾಗವನ್ನು ಸ್ವಲ್ಪ ಸ್ವಲ್ಪವಾಗಿ ನೇರಳೆ ಹಣ್ಣು ಅಕ್ರಮಿಸುತ್ತಿದೆ.
ಯಾವ ತಳ್ಳುವ ಗಾಡಿಗಳನ್ನು ನೋಡಿದರೂ ಕಪ್ಪು ಸುಂದರಿ ನೇರಳೆ ಹಣ್ಣು ಕಾಣಿಸುತ್ತಿದೆ.
ರಸ್ತೆ ಬದಿಗಳಲ್ಲಿ, ತಳ್ಳುವ ಗಾಡಿಗಳಲ್ಲಿ ನೇರಳೆ ಹಣ್ಣನ್ನು ಮಾರಾಟ ಮಾಡಲಾಗುತ್ತಿದೆ. ಈ ಬಾರಿ ನೇರಳೆ ಹಣ್ಣಿನ ಇಳುವರಿ ಕಡಿಮೆಯಾಗಿರುವ ಪರಿಣಾಮ ಹಣ್ಣಿನ ಬೆಲೆ ಏರಿಕೆಯಾಗಿದೆ.
ಆದರೆ ಹಲವು ಔಷಧೀಯ ಗುಣ ಹೊಂದಿರುವುದರಿಂದ ಬೆಲೆ ಏರಿಕೆಯ ನಡುವೆಯೂ ನೇರಳೆ ಹಣ್ಣಿನ ಖರೀದಿಗೆ ಗ್ರಾಹಕರು ಮುಂದಾಗಿದ್ದಾರೆ.
ಹಾಗಾಗಿ ನೇರಳೆ ಹಣ್ಣಿನ ಮಾರಾಟ ಮೊದಲ ವಾರದಲ್ಲಿ ತುಸು ಹೆಚ್ಚಾಗಿತ್ತು,ನಿನ್ನೆ ಸ್ವಲ್ಪ ಕಡಿಮೆಯಾಗಿತ್ತು.
ಸಾಮಾನ್ಯವಾಗಿ ನೇರಳೆ ಹಣ್ಣು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಹೂ ಬಿಡುವುದಕ್ಕೆ ಶುರುಮಾಡಿ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಾಯಿ ಕಟ್ಟಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಣ್ಣು ಬಿಡುವುದಕ್ಕೆ ಶುರು ಮಾಡುತ್ತದೆ.
ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ನೇರಳೆಗೆ 300 ರೂಗಳಿಂದ 350 ರೂ ಮಾರಾಟ ಮಾಡಲಾಗುತ್ತಿತ್ತು.ನಿನ್ನೆಯಿಂದ 280 ರೂಗೆ ಇಳಿದಿದೆ.
ಕಳೆದ ಬಾರಿ ನೇರಳೆ ಹಣ್ಣನ್ನು ಕೆ.ಜಿಗೆ 250 ರಿಂದ 300 ರೂವರೆಗೆ ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಜಾಸ್ತಿಯಾಗಿದೆ.
ನೇರಳೆ ಅನೇಕ ರೋಗಕ್ಕೆ ಮದ್ದು:
ನೇರಳೆ ಕೇವಲ ಒಂದು ಹಣ್ಣು ಮಾತ್ರವಲ್ಲ. ಈ ಹಣ್ಣು ಅನೇಕ ಔಷಧಿಯ ಗುಣಗಳನ್ನು ಹೊಂದಿದೆ. ಈ ನೇರಳೆ ಹಣ್ಣನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣ, ತೊದಲುವಿಕೆ ನಿವಾರಣೆ, ಜೀರ್ಣಕ್ರಿಯೆ,ಮಲಬದ್ದತೆ, ಗಂಟಲು ನೋವು, ಬಾಯಿ ದುರ್ಗಂಧ, ಗೂರಲು, ಉಬ್ಬಸ ತಡೆಗೆ ರಾಮಬಾಣದಂತೆ ಉಪಯುಕ್ತವಾಗಿದೆ ಎನ್ನುತ್ತಾರೆ ವೈದ್ಯರು.