ಮೈಸೂರು: ವಿದ್ಯಾರ್ಥಿಗಳು ಪರಿಸರ ಪ್ರೇಮದ ಕಾಳಜಿ ಇಟ್ಟುಕೊಂಡು ಮರ-ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಕರೆ ನೀಡಿದರು.
ಪರಿಸರ ಉಳಿದರೆ ನಾವು ಉಳಿಯುತ್ತೇವೆ, ಪರಿಸರ ವಿನಾಶವಾದರೆ ಮಾನವ ದೊಡ್ಡ ಬೆಲೆ ತೆತ್ತಬೇಕು ಎಂದು ಶಾಸಕರು ಎಚ್ಚರಿಸಿದರು.
ನಗರದ ದಕ್ಷ ಪಿಯು ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಮಕ್ಕಳು ಪರಿಸರ ಸಂರಕ್ಷಣೆ ಮಾಡಬೇಕು. ಒಂದು ಮರವನ್ನು ಕಡಿದರೆ ಹತ್ತು ಮರಗಳನ್ನು ನೆಡಬೇಕು. ಮಳೆ,ಗಾಳಿ,ಬೆಳಕು ಸಿಗಬೇಕಾದರೆ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದು ಸಲಹೆ ನೀಡಿದರು.
ನಾನು ಸಹಕಾರ ಸಚಿವನಾಗಿದ್ದಾಗ ವಿಧಾನಸಭಾದ್ಯಕ್ಷ ಕೆ.ಆರ್.ಪೇಟೆ ಕೃಷ್ಣ, ವಿಧಾನ ಪರಿಷತ್ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರೊಂದಿಗೆ ಸವಾಲೋಚಿಸಿ ಸಾಲು ಮರದ ತಿಮ್ಮಕ್ಕ ಅವರನ್ನು ಮೈಸೂರಿಗೆ ಕರೆತಂದು ಒಂದೇ ದಿನದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವಂತೆ ಮಾಡಿದ್ದೆ ಎಂದು ಹೇಳಿದರು.
ಶಾಲೆ,ಆಸ್ಪತ್ರೆ,ರಸ್ತೆಗಳು,ಪಾರ್ಕ್‌ಗಳು ಮೊದಲಾದ ಕಡೆಗಳಲ್ಲಿ ಒಂದೇ ದಿನ ಲಕ್ಷ ಗಿಡ ನೆಡುವಂತೆ ನೋಡಿಕೊಂಡಿದ್ದೆ. ಅದೇ ರೀತಿ ಜಿಪಂ ಅಧ್ಯಕ್ಷನಾಗಿದ್ದಾಗ ಮೈಸೂರಿನಿಂದ ಕುಶಾಲನಗರ, ಕೆ.ಆರ್.ನಗರ, ಹುಣಸೂರಿನಿಂದ ಹನಗೋಡು ತನಕ ಮರಗಳನ್ನು ನೆಡುವಂತೆ ಮಾಡಿದ್ದರಿಂದ ಅವು ದೊಡ್ಡದಾಗಿ ಬೆಳೆದು ಬಿಸಿಲಿಗೆ ನೆರಳು,ನೀಡುತ್ತಿವೆ ಜತೆಗೆ ರಸ್ತೆಯಲ್ಲಿ ಹೋಗುವವರಿಗೆ ಆನಂದ ಕೊಡುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಸ್ತುತ ದಿನದಲ್ಲಿ ಸತ್ಯದ ಹಾದಿಯಲ್ಲಿ ನಡೆಯುವವರು ಕಡಿಮೆಯಾಗುತ್ತಿರುವ ಜತೆಗೆ, ಪ್ರಾಮಾಣಿಕತೆ,ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಬೆಲೆ ಇಲ್ಲದಂತಾಗಿದೆ, ಅಸತ್ಯದಲ್ಲಿ ನಡೆಯುವವರಿಗೆ ಪ್ರೋತ್ಸಾಹ ದೊರೆಯುವಂತಾಗಿದೆ, ಸತ್ಯ ಹೇಳುತ್ತೇನೆಂದರೆ ಅಂತಹವರ ಬಾಯಿ ಮುಚ್ಚಿಸಲಾಗುತ್ತಿದೆ. ಪ್ರಾಮಾಣಿಕರಿಗಿಂತ ಅಸತ್ಯದ ಹಾದಿಯಲ್ಲಿ ಸಾಗುವವರಿಗೆ ಬೆಲೆ. ಸತ್ಯವಾಗಿ ನಡೆಯುತ್ತೇನೆಂದು ಹೊರಟವರಿಗೆ ಆರ್‌ಟಿಐ ಮೂಲಕ ತೊಂದರೆ ಕೊಡುವ ಕೆಲಸ ನಡೆಯುತ್ತಿದೆ ಎಂದು ಜಿಟಿಡಿ ಅಸಮಾಧಾನ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದಕ್ಷ ಕಾಲೇಜಿನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ನಾನು ಪದವಿ ಪಡೆದಿಲ್ಲ ಅಂದರೂ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟರು. ೨೦ ದಿನಗಳ ಕಾಲ ಕಾದು ಗ್ರಾಮೀಣಾಭಿವೃದ್ದಿ, ಸಹಕಾರ ಸೇರಿದಂತೆ ಬೇರೆ ಖಾತೆ ಕೊಡುವಂತೆ ಕೇಳಿದ್ದೆ, ಖಾತೆ ಬದಲಾಗದ ಕಾರಣ ಉನ್ನತ ಶಿಕ್ಷಣ ಸಚಿವ ಸ್ಥಾನದ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೆ ಎಂದು ಜಿಟಿಡಿ ಸ್ಮರಿಸಿದರು.
ಸಚಿವನಾದ ಮೊದಲಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿ ಹಲವಾರು ಮಾಹಿತಿಗಳನ್ನು ಅರಿತುಕೊಂಡಿದ್ದೆ ಎಂದು ತಿಳಿಸಿದರು.
ಶಿಕ್ಷಕರು,ಮುಖ್ಯಶಿಕ್ಷಕರು ಎನ್ನುವ ತಾರತಮ್ಯದಿಂದ ನೋಡದೆ ಎಲ್ಲರೂ ಒಂದೇ ಎನ್ನುವ ಭಾವನೆ ಬರಬೇಕು. ಸಂಬಳಕ್ಕಾಗಿ ದುಡಿಯುತ್ತಿದ್ದೇವೆ ಎನ್ನುವ ಭಾವನೆ ಬಿಟ್ಟು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ,ಉತ್ತಮ ನಾಯಕತ್ವ ರೂಪಿಸುವಂತಹ ರೀತಿಯಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ನನ್ನ ಮಕ್ಕಳಿಗೆ ತಿರುಪತಿಯಲ್ಲಿ ಸರಳ ವಿವಾಹ ಮಾಡಿದೆ. ನನ್ನ ತಮ್ಮನ ಮಗನ ಮದುವೆಯನ್ನೂ ಧರ್ಮಸ್ಥಳದಲ್ಲಿ ಮಾಡಿದೆ. ಆದರೆ,ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ವೈಭವದ ಮದುವೆ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ಜಮೀನು ಮಾರಾಟ ಮಾಡಿ ಮಗಳ, ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ,ಅದರಲ್ಲೂ ಪೈಪೋಟಿ ಮಾಡುತ್ತಿದ್ದಾರೆ.ಇತ್ತೀಚೆಗೆ ಸಿಹಿ ತಿನ್ನುವ ಜನರು ಕಡಿಮೆಯಾಗಿದ್ದರೂ ಎರಡು,ಮೂರು ರೀತಿಯ ಸಿಹಿ ಬಡಿಸಿ ಹಣ ಪೋಲು ಮಾಡುತ್ತಾರೆ ಎಂದು ವಿಷಾದಿಸಿದರು.
ಇಂದು ಅನಾಥಾಲಯಗಳು ಹೆಚ್ಚಾಗುತ್ತಿವೆ. ಪ್ರೀತಿಯಿಂದ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಕಡಿಮೆಯಾಗಿದೆ. ದಕ್ಷ ಕಾಲೇಜು ಆಡಳಿತ ಮಂಡಳಿಯ ಜಯಚಂದ್ರರಾಜೇ ಅರಸ್, ಗೌತಮ್‌ರಾಜೇ ಅರಸ್, ನಿರ್ದೇಶಕ ಪಿ.ಹರೀಶ್, ಪ್ರಾಂಶುಪಾಲ ಡಾ.ಮಹೇಶ್, ಉಪ ಪ್ರಾಂಶುಪಾಲ ಎಂ.ಡಿ.ಬಷೀರ್ ಮತ್ತಿತರರು ಹಾಜರಿದ್ದರು.