ಮೈಸೂರು: ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾದ ನಟ ಕಮಲ್ ಹಾಸನ್ ಅವರ ಥಗ್ ಲೈಪ್ ಚಿತ್ರ ಬಹಿಷ್ಕರಿಸುವಂತೆ ಸ್ವಾಭಿಮಾನಿ ಕನ್ನಡಿಗರಿಗೆ ಸೈಕಲ್ ಸವಾರಿ ಮೂಲಕ ಮನವಿ ಮಾಡಲಾಯಿತು.
ಮೈಸೂರಿನ ಅಗ್ರಹಾರ ವೃತ್ತದ ಪದ್ಮ ಚಿತ್ರ ಮಂದಿರ ಬಳಿ ಜಮಾಯಿಸಿದ ಪ್ರಜ್ಞಾವಂತ ನಾಗರೀಕರ ವೇದಿಕೆಯ ಪದಾಧಿಕಾರಿಗಳು, ಕನ್ನಡದ ಚಿತ್ರಗಳಿಗೆ ಸೈಕಲ್ ಸವಾರಿ ಮೂಲಕ ಪ್ರಚಾರ ಮಾಡುತ್ತಿದ್ದ ಪಾರಂಪರಿಕ ಮಾದರಿಯಲ್ಲೇ ಕಮಲ್ ಹಾಸನ್ ಭಾವಚಿತ್ರಕ್ಕೆ ಮಸಿ ಬಳಿದು ಥಗ್ ಲೈಪ್ ಚಿತ್ರ ನೋಡದಂತೆ ಬಹಿಷ್ಕರಿಸೋಣ ಎಂದು ಸಂದೇಶ ಸಾರಿದರು.
ಇದೇ ಸಂಧರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಅವರು ಮಾತನಾಡಿ ಕನ್ನಡದ ನೆಲ ಜಲ ಭಾಷೆ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿಯೆತ್ತುವುದು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗನ ಕರ್ತವ್ಯ ಎಂದು ಹೇಳಿದರು.
ಕಮಲ್ ಹಾಸನ್ ಚಿತ್ರ ಪ್ರದರ್ಶನಕ್ಕೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ,ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳೋಣ, ಆದರೆ ಆ ಚಿತ್ರವನ್ನ ನೋಡಬೇಕೆಂದು ಆದೇಶಿಸಿಲ್ಲ, ಹಾಗಾಗಿ ಕನ್ನಡಿಗರನ್ನ ಕೆರಳಿಸಿರುವ ದುರಂಹಕಾರಿ ಕಮಲ್ ಹಾಸನ್ ಚಿತ್ರವನ್ನ ಕನ್ನಡಿಗರು ನೋಡಬಾರದು ಚಿತ್ರ ನಿರ್ಮಾಪಕರು ಚಿತ್ರವಿತರಕರು ಕೂಡ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡದೇ ಕನ್ನಡದ ಅಸ್ಮಿತೆಗೆ ಗೌರವಿಸಬೇಕು ಎಂದು ಸಲಹೆ ನೀಡಿದರು.
ನಂತರ ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ ಮಾತನಾಡಿ, ತಮಿಳುನಾಡಿನಲ್ಲೆ ಸಾಕಷ್ಟು ತಿರಿಸ್ಕಾರ ಅಪಕೀರ್ತಿ ಪಡೆದಿರುವ ನಟ ಕಮಲ್ ಹಾಸನ್ ಕನ್ನಡದ ಭಾಷೆ ಬಗ್ಗೆ ಅವಹೇಳನವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ, ಕ್ಷಮೆಯನ್ನೇ ಕೇಳದೆ ದುರಂಕಾರ ಮೆರೆದಿರುವ ಕಮಲ್ ಹಾಸನ್ ಚಿತ್ರವನ್ನ ನೋಡದೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕು, ಕೆಲವು ಸಂಘ ಸಂಸ್ಥೆಗಳು ಕಮಲ್ ಹಾಸನನಿಗೆ ನೀಡಿರುವ ಪ್ರಶಸ್ತಿಗಳನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದರು,
ನಗರಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ, ನಿರ್ದೇಶಕರಾದ ಹೆಚ್ ವಿ ಭಾಸ್ಕರ್,ಸಾಮಾಜಿಕ ಹೋರಾಟಗಾರ ವಿಕ್ರಮ್ ಅಯ್ಯಂಗಾರ್,ನಿರೂಪಕ ಅಜಯ್ ಶಾಸ್ತ್ರಿ,ಎಸ್ ಎನ್ ರಾಜೇಶ್, ಗೌರಿಶಂಕರ ನಗರದ ಶಿವು,ರಾಕೇಶ್,ಶಿವಲಿಂಗ ಸ್ವಾಮಿ, ಜತ್ತಿ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.