ಮೈಸೂರು: ಮುಂಜಾನೆ ತಾಯಿಯ ದರುಶನಕ್ಕೆ ಬಂದ ಭಕ್ತರನ್ನು ಚಾಮುಂಡಿ ಬೆಟ್ಟದಲ್ಲಿ ತುಂತುರು ಮಳೆ ಮತ್ತು ಇಬ್ಬನಿ ನಡುವೆ ಹೂವೂಗಳ ತಳಿರು ತೋರಣ ಸ್ವಾಗತಿಸಿತು.
ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ನಾಡ ಅಧಿದೇವಿ ಚಾಮುಂಡೇಶ್ವರಿ ತಾಯಿಗೆ ಇಂದು ಮುಂಜಾನೆ ಪಂಚಾಮೃತ ಅಭಿಷೇಕ, ಅರ್ಚನೆ, ಸಹಸ್ರನಾಮ ಅರ್ಚನೆ ಮಾಡಲಾಯಿತು.
ದೇವಿ ಚಾಮುಂಡಿ ವಿವಿಧ ಹೂವುಗಳ ನಡುವೆ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಾ ಭಕ್ತರಿಗೆ ದರ್ಶನ ನೀಡಿದ್ದಾಳೆ.
ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಖಾಸಗಿ ವಾಹನಗಳ ಪ್ರವೇಶ ನಿರ್ಭಂಧಿಸಲಾಗಿದ್ದು, ಕೆ.ಎಸ್.ಆರ್.ಟಿ.ಸಿ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಲಲಿತಮಹಲ್ ಪ್ಯಾಲೇಸ್ ಸಮೀಪದ ಆವರಣದಿಂದಲೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ನಾಡದೇವಿಯ ದರುಶನ ಪಡೆಯಲು ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಭಕ್ತರ ಅನುಕೂಲಕ್ಕಾಗಿ 300ರೂ , 2 ಸಾವಿರ ಟಿಕೇಟ್ ವ್ಯವಸ್ಥೆ ಮಾಡಲಾಗಿದೆ.
2000 ಟಿಕೇಟ್ ಪಡೆದವರಿಗೆ ಲಲಿತ ಮಹಲ್ ಹೋಟೆಲ್ ಸಮೀಪ ಬೆಟ್ಟಕ್ಕೆ ಎಸಿ ಬಸ್ ನಲ್ಲಿ ಕರೆದುಕೊಂಡು ಹೋಗಿ ಬೆಟ್ಟದಲ್ಲಿ ನೇರವಾಗಿ ದರ್ಶನ ಮಾಡಿ ನಂತರ ಪ್ರಸಾದ ರೂಪದಲ್ಲಿ ಚಾಮುಂಡೇಶ್ವರಿ ವಿಗ್ರಹ, ಲಾಡು, ಕುಡಿಯುವ ನೀರಿನ ಬಾಟಲ್ ,ಒಂದು ಬ್ಯಾಗ್ ವಿತರಿಸಲಾಗುತ್ತಿದೆ.
ಆಷಾಢ ಶುಕ್ರವಾರದ ಪ್ರಯುಕ್ತ ನಾಡ ಅಧಿದೇವತೆಯ ದರ್ಶನಕ್ಕಾಗಿ ಸಾವಿರಾರು ಮಂದಿ ಭಕ್ತರು ಮೆಟ್ಟಿಲುಗಳನ್ನು ಹತ್ತಿ ಆಗಮಿಸಿ ದೇವಿಯ ದರ್ಶನ ಪಡೆದರು.
ಮುಂಜಾನೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.