ಧರ್ಮಸ್ಥಳ ಅಪರಿಚಿತ ಶವ ಪ್ರಕರಣ:ಯಾರ ಒತ್ತಡಕ್ಕೂ ಮಣಿಯಲ್ಲ;ಎಸ್ ಐಟಿ ರಚನೆ ಇಲ್ಲ-ಸಿಎಂ

ಮೈಸೂರು: ಯಾರ ಒತ್ತಡಕ್ಕೂ ನಾವು ಮಣಿಯುವುದೂ ಇಲ್ಲ, ಧರ್ಮಸ್ಥಳ ಅಪರಿಚಿತ ಶವ ಪ್ರಕರಣ ಕುರಿತು ಎಸ್ ಐಟಿ ರಚನೆ ಸಧ್ಯಕ್ಕೆ ಮಾಡುವುದೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಎಸ್ ಐಟಿ ಸದ್ಯಕ್ಕೆ ರಚನೆ ಮಾಡಲಾಗುವುದಿಲ್ಲ, ಯಾರೋ ಹೇಳಿದರು ಅಂತ ಎಸ್ ಐಟಿ ರಚನೆ ಮಾಡಲು ಸಾಧ್ಯವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ,ನಡೆಸಲಿ ನಂತರ ಅಗತ್ಯವಿದ್ದರೆ ಎಸ್ ಐಟಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.

ಈ ವಿಚಾರದಲ್ಲೂ ಯಾವುದೇ ಒತ್ತಡಕ್ಕೆ ನಾವು ಬಗ್ಗುವುದಿಲ್ಲ,ನಮಗೆ ಯಾರ ಒತ್ತಡವೂ ಇಲ್ಲ ಒಂದು ವೇಳೆ ಬಂದರೂ ನಾವು ಕೇರ್ ಮಾಡುವುದಿಲ್ಲ,ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಮಾಧ್ಯಮ ದವರ ಪ್ರಶ್ನೆಗೆ ಉತ್ತರಿಸಿದರು.

ಎತ್ತು ಈಯಿತು ಕಟ್ಟು ಕೊಟ್ಟಿಗೆಗೆ ಅಂತ ಗಾದೆ ಮಾತು ಇದೆಯಲ್ಲವಾ, ಎತ್ತು ಇಯೋದೂ ಇಲ್ಲಾ ಕೊಟ್ಟಿಗೆಗೆ ಕಟ್ಟೋಕೂ ಆಗಲ್ಲ ಎಂದು ಹೇಳಿದರು.

ಒಂದು ವೇಳೆ ಪೊಲೀಸರು ಎಸ್ ಐಟಿ ಅಗತ್ಯವಿದೆ ಅಂತ ವರದಿ ಕೊಟ್ಟರೆ ರಚನೆ ಮಾಡುತ್ತೇವೆ ಎಂದು ಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದರು.

ಆರ್ ಸಿಬಿ ಕಾಲ್ತುಳಿತ ಪ್ರಕರಣ ಖುನ್ನಾ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಕ್ಯಾಬಿನೆಟ್ ಮೀಟಿಂಗ್ ಬಳಿಕ ಈ ಬಗ್ಗೆ ಮಾತನಾಡುತ್ತೇನೆ. ಎಲ್ಲಾ ಪ್ರತಿಗಳನ್ನ ಸಚಿವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಸಚಿವರ ಜೊತೆಯೂ ಚರ್ಚೆ ಮಾಡಬೇಕು. ಈ ಕುರಿತು ಪರಿಶೀಲಿಸಿ,ಮಾತನಾಡುತ್ತೇನೆ ಎಂದು ಉತ್ತರಿಸಿದರು.

ಸರ್ಕಾರದ ಸಾಧನಾ‌ ಸಮಾವೇಶದ ಬಗ್ಗೆ ಬಿಜೆಪಿಯವರು ಟೀಕಿಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಸರ್ಕಾರದ ಸಾಧನೆ ಜನರಿಗೆ ತಿಳಿಸಲು ಸಮಾವೇಶ ಮಾಡುತ್ತಿದ್ದೇವೆ. ಏನೆಲ್ಲಾ ಅನುದಾನ ಕೊಟ್ಟಿದ್ದೇವೆ ಅಂತ ಜನರಿಗೆ ತಿಳಿಸಬೇಕಲ್ಲವಾ, ಸಾವಿರಾರು ಕೋಟಿ ಹಣ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಈ ಬಗ್ಗೆ ಜನರಿಗೆ ಗೊತ್ತಾಗಬೇಕು ಈ ನಿಟ್ಟಿನಲ್ಲಿ ಸಮಾವೇಶ ನಡೆಯುತ್ತಿದೆ ಎಂದು ಬಿಜೆಪಿಗರಿಗೆ ಟಾಂಗ್ ನೀಡಿದರು ಸಿದ್ದರಾಮಯ್ಯ.

ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ದಲಿತರನ್ನು ಆಯ್ಕೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಅವರು ದಲಿತ ಪ್ರಧಾನಿ ಮಾಡಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ದಲಿತರಿಗೆ ಎಲ್ಲವನ್ನೂ ನೀಡಿದೆ. ಈ ದೇಶದಲ್ಲಿ ಸಂವಿಧಾನಾತ್ಮಕವಾಗಿ ಇರುವ ಪಕ್ಷ ಕಾಂಗ್ರೆಸ್ ಮಾತ್ರ. ವಿಜಯೇಂದ್ರ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಕೃಷ್ಣಾ ಜಲವಿವಾದ ನ್ಯಾಯಾಧೀಕರಣದ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ ನೀರು ಹಂಚಿಕೆಯ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಅಧಿಸೂಚನೆ ಹೊರಡಿಸಿಲ್ಲ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ನಡುವೆ ಅಂತರ್ ರಾಜ್ಯ ಜಲವಿವಾದವಿದೆ,ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆಯ ಅಧಿಸೂಚನೆ ಹೊರಡಿಸಲು ಕೇಂದ್ರಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ ಮತ್ತು ತೀರ್ಪಿನನ್ವಯ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಯಾವುದೇ ನಷ್ಟವೂ ಆಗುವುದಿಲ್ಲ, ಆಲಮಟ್ಟಿ ಜಲಾಶಯದ ಎತ್ತರವನ್ನು 524.26 ಮೀ ಗಳಿಗೆ ಹೆಚ್ಚಿಸಲು ಅನುಮತಿ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.