ಮೈಸೂರು: ಆಷಾಢ ಮಾಸದ ನಾಲ್ಕನೇ ಹಾಗೂ ಕೊನೆಯ ಶುಕ್ರವಾರವಾದ ಪ್ರಯುಕ್ತ
ಚಾಮುಂಡಿ ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಸಿಂಹವಾಹಿನಿ ಅಲಂಕಾರದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಭಕ್ತರಿಗೆ ದರುಶನ ನೀಡಿದಳು.
ಮುಂಜಾನೇಯಿಂದಲೇ ಸರದಿ ಸಾಲಿನಲ್ಲಿ ನಿಂತು ಸಹಸ್ರಾರು ಭಕ್ತರು ತಾಯಿಯ ದರ್ಶನ ಪಡೆದರು.
ಉತ್ಸವ ಮೂರ್ತಿಗೆ ವಿವಿಧ ಬಗೆಯ ಹೂವು ಹಾಗೂ ನವಿಲಿನ ಹಾರದ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಆವರಣವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಮುಂಜಾನೆ 4.30ರಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿತು.
4ನೆ ಆಷಾಢ ಶುಕ್ರವಾರದ ಪ್ರಯುಕ್ತ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಇಂದು ಬೆಳಗಿನಿಂದಲೇ ಭಕ್ತರು ಆಗಮಿಸಿತ್ತಲೇ ಇದ್ದಾರೆ.
ಬೆಳಗಿನ ಜಾವವೇ ಸಾವಿರಾರು ಭಕ್ತರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬಂದು ದೇವಿ ದರ್ಶನಕ್ಕೆ ಕಾದು ನಿಂತಿದ್ದರು.
ಮುಂಜಾನೆ ನಾಲ್ಕು ಗಂಟೆಗೆ ದೇವಿಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಅಭಿಷೇಕ ಮಾಡಿ ನಂತರ ಪಂಚಾಮೃತ ಅಭಿಷೇಕ ನೆರವೇರಿಸಿ ಆನಂತರ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಅಷ್ಟೋತ್ತರ, ಸಹಸ್ರನಾಮವನ್ನು ನೆರವೇರಿಸಿ ಮಹಾ ನೈವೇದ್ಯದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಆಹಾರ ಖಾತೆ ಸಚಿವ ಮುನಿಯಪ್ಪ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.
ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರ ಮೆಟ್ಟಿಲುಗಳನ್ನು ಬರಿಗಾಲಿನಲ್ಲಿಯೇ ಹತ್ತಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಎಂದಿನಂತೆ ಭಕ್ತರಿಗೆ ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ
ಬಿಗಿ ಪೊಲೀಸ್ ಬಂದೋ ವ್ಯವಸ್ಥೆ ಏರ್ಪಡಿಸಲಾಗಿತ್ತು.