ಮೈಸೂರು: ಪೊಲೀಸರೆಂದರೆ ಶಿಸ್ತು ಹಾಗೂ ರಕ್ಷಣೆಯ ಪ್ರತೀಕ. ದೇಶದ ಹೊರಗಡೆ ಸೈನಿಕರು ನಮ್ಮನ್ನು ಹೇಗೆ ರಕ್ಷಣೆ ಮಾಡುತ್ತಾರೊ ಹಾಗೆಯೇ ದೇಶದ ಒಳಗಡೆ ನಮ್ಮನ್ನು ರಕ್ಷಣೆ ಮಾಡುತ್ತಿರುವುದು ಪೊಲೀಸ್ ಇಲಾಖೆ ಎಂದು ರಾಷ್ಟ್ರ ಮಟ್ಟದ ಖೋ-ಖೋ ಕ್ರೀಡಾಪಟು ಬಿ. ಚೈತ್ರ ಹೇಳಿದರು.
ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಜ್ಯೋತಿನಗರ ಡಿ.ಎ.ಆರ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಲು ಹಾಗೂ ಯಾವುದೇ ಕಾರ್ಯಕ್ರಮಗಳಲ್ಲಿ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಯವರಿಂದ ಮಾತ್ರ ಸಾಧ್ಯ. ಹೆಣ್ಣು ಮಕ್ಕಳು ಯಾವುದೇ ಭಯ ಇಲ್ಲದೆ ಹೊರಗಡೆ ಓಡಾಡಲು ರಕ್ಷಣೆ ನೀಡುತ್ತಿರುವವರು ಪೊಲೀಸರು ಎಂದು ಬಣ್ಣಿಸಿದರು.
ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬವನ್ನು ಬಿಟ್ಟು ದೇಶದಲ್ಲಿ ನಡೆಯುವ ಅಮಾನವೀಯ ಕೃತ್ಯವನ್ನು ತಡೆಗಟ್ಟಲು ಸರ್ಕಾರದ ಶಿಷ್ಟಾಚಾರದಂತೆ ಹಗಲಿರುಳೆನ್ನದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಎಲ್ಲರಿಗೂ ರಕ್ಷಣೆ ನೀಡಿದ್ದು ಪೊಲೀಸ್ ಇಲಾಖೆ ಎಂದು ಹೇಳಿ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್, ಸಿ. ಮಲ್ಲಿಕ್, ಸವಿತಾ ವಗರ್ ಮತ್ತಿತರರು ಉಪಸ್ಥಿತರಿದ್ದರು.

