ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಪ್ರದೇಶದಲ್ಲಿ ಬಂದ್ ಆಗಿರುವ ಸಫಾರಿ ಪುನರಾರಂಭಿಸುವಂತೆ ಕೋರಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮೈಸೂರು ಟ್ರಾವಲ್ಸ್ ಅಸೋಸಿಯೇಶನ್ ಪತ್ರ ಬರೆದಿದೆ.
ಈ ಸಂಬಂಧ ಪತ್ರ ಬರೆದಿರುವ ಮೈಸೂರು ಟ್ರಾವಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ದಕ್ಷಿಣ ಭಾರತದ ಪ್ರಮುಖ ಅರಣ್ಯ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಂಡಿರುವ ಕಾರಣ ಸಾಕಷ್ಟು ಸಮಸ್ಯೆಗಳಾಗಿವೆ ಎಂದು ತಿಳಿಸಿದ್ದಾರೆ.
ಮೈಸೂರಿಗೆ ಬರುವ ಬಹುತೇಕ ಎಲ್ಲ ಪ್ರವಾಸಿಗರೂ ಇಲ್ಲಿಗೆ ಭೇಟಿ ಕೊಟ್ಟೇ ಕೊಡುತ್ತಾರೆ. ಸಫಾರಿಗೆಂದು ಕೆಲಸ ಮಾಡುವ ಸಾವಿರಾರು ಜನರ ಕುಟುಂಬಗಳು ಇದರ ಮೇಲೆ ಅವಂಬಿತವಾಗಿವೆ. ಸಫಾರಿ ಇಲ್ಲದಿದ್ದರೆ ಅವರೆಲ್ಲರ ಕುಟುಂಬಗಳಿಗೂ ಬೇರೆ ದಿಕ್ಕು ಇಲ್ಲದಂತಾಗುತ್ತದೆ ಮನದಟ್ಟು ಮಾಡಿದ್ದಾರೆ.
ಈ ಭಾಗದಲ್ಲಿರುವ ಎಲ್ಲ ಹೋಟೆಲ್ ಗಳು ಈ ಪ್ರವಾಸಿ ಆಕರ್ಷಣೆ ಇದೆ ಎಂಬ ಆಧಾರದ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿವೆ. ಈಗ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರು ಪರದಾಡುವಂತಾಗಿದೆ ಅಲವತ್ತುಕೊಂಡಿದ್ದಾರೆ.
ಟ್ರಾವೆಲ್ ಏಜೆಂಟ್ ಗಳು, ಪ್ರವಾಸಿ ವಾಹನ ಚಾಲಕರು, ಹೋಟೆಲ್ ಮಾಲೀಕರು, ಪ್ರವಾಸಿ ಗೈಡ್‌ಗಳೆಲ್ಲರೂ ನಿಯಮದ ಪ್ರಕಾರ ಅಗತ್ಯವಿರುವ ಮಾನ್ಯತೆಗಳನ್ನೆಲ್ಲಾ ಪಡೆದು ತಮ್ಮ ಉದ್ಯಮ ನಡೆಸಿದರೂ ಈಗ ಸಫಾರಿ ಸ್ಥಗಿತಗೊಂಡಿರುವ ಕಾರಣ ಎಲ್ಲರ ಮೇಲೂ ಆರ್ಥಿಕ ಹೊಡೆತ ಬೀಳುತ್ತಿದೆ. ಈವರೆಗೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಫಾರಿ ನಡೆಸಲಾಗುತ್ತಿದ್ದು, ಯಾವುದೇ ದುರ್ಘಟನೆಗಳೂ ಸಫಾರಿ ಸಮಯದಲ್ಲಿ ನಡೆದಿಲ್ಲ,ಆದ್ದರಿಂದ ಕೂಡಲೇ ಬಂಡೀಪುರ, ನಾಗರಹೊಳೆ ಪ್ರದೇಶದಲ್ಲಿ ಸಫಾರಿ ಪುನಾರಂಭಿಸಬೇಕು ಎಂದು ಮೈಸೂರು ಟ್ರಾವಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಕೋರಿದ್ದಾರೆ.

