ಮೈಸೂರು,ಡಿ.1: ರಾಜ್ಯ ಸರ್ಕಾರ ಹೆಚ್.ಐ.ವಿ ತಡೆಗಟ್ಟಬೇಕೆಂಬ ಉದ್ದೇಶ ಹೊಂದಿದೆ, 2030ಕ್ಕೆ ಏಡ್ಸ್ ಶೂನ್ಯ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಇಟ್ಟು ಕೊಂಡಿದ್ದು ಎಲ್ಲರೂ ಕೈ ಜೋಡಿಸಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೆ.ಕೆ.ಗ್ರೌಂಡ್ಸ್ ನಲ್ಲಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ಹೆಚ್.ಐ.ವಿ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಎ.ಆರ್.ಟಿ ಚಿಕಿತ್ಸೆ ನೀಡಿ ಹೆಚ್.ಐ.ವಿ ಸೋಂಕು ಏಡ್ಸ್ ಆಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೆಚ್.ಐ.ವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಹೆಚ್.ಐ.ವಿ ಸೋಂಕಿತ ಗಭಿರ್ಣಿ ಮಹಿಳೆಯರಿಂದ ಮಗುವಿಗೆ ಹಾಗೂ ಹೆಚ್ಚಾಗಿ ಒಬ್ಬರು ಬಳಸುವ ಡ್ರಗ್ಸ್ ಸೂಜಿಯನ್ನು ಮತ್ತೊಬ್ಬರು ಬಳಸುವುದರಿಂದ ಸಾಮಾನ್ಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹೆಚ್.ಐ.ವಿ ಹರಡುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಪುರುಷರಿಂದ ಪುರುಷರಿಗೆ
ಸಲಿಂಗ ಲೈಂಗಿಕ ಸಂಪರ್ಕದಿಂದ ಹೆಚ್.ಐ.ವಿ ಹರಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಹೆಚ್.ಐ.ವಿ ಹರಡದಂತೆ ತಡೆಗಟ್ಟಲು ಹೆಚ್ಚಾಗಿ ಯುವ ಜನರು ಇರುವ ಹಾಸ್ಟಲ್, ಕಾಲೇಜು ಹಾಗೂ ಲೈಂಗಿಕ ಕಾರ್ಯಕರ್ತೆಯರು ವಾಸಿಸುವ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಚ್.ಐ.ವಿ. ಸೋಂಕು ಒಟ್ಟಿಗೆ ಊಟ ಸೇವಿಸುವುದು, ನೆಗಡಿ ಕೆಮ್ಮಿನಿಂದ ಹರಡುವುದಿಲ್ಲ. ಹೆಚ್.ಐ.ವಿ ಸೋಂಕಿತರಿಗೂ ಸಹ ಸಮಾಜದಲ್ಲಿ ಗೌರವಯುತ ಬದುಕು ನಡೆಸುವ ಹಕ್ಕಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಅವರು ಮಾತನಾಡಿ, ಇಂದಿಗೂ ಈ ಖಾಯಿಲೆ ಅಂದರೆ ಎಲ್ಲರಿಗೂ ಭಯ ಇದೆ, ಮೊದಲಿಗೆ ದೇಶದಲ್ಲಿ ಇಷ್ಟೊಂದು ಆಸ್ಪತ್ರೆಗಳು ವೈದ್ಯರು ಇರಲಿಲ್ಲ ಹಾಗಾಗಿ ಸರಿಯಾದ ಪರೀಕ್ಷೆ ಆಗುತ್ತಿರಲಿಲ್ಲ ಆದರೆ ಇಂದು ಆಸ್ಪತ್ರೆಗಳು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಶಸ್ತ್ರ ಚಿಕಿತ್ಸೆಗೆ ಒಳಪಡುವ ಪ್ರತಿಯೊಬ್ಬರನ್ನು ಏಡ್ಸ್ ಟೆಸ್ಟ್ ಮಾಡಿಯೇ ಮುಂದಿನ ಚಿಕಿತ್ಸೆ ಕೊಡುತ್ತಾರೆ ಹಾಗಾಗಿ ಯಾರು ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಏಡ್ಸ್ ಪ್ರಿವೆನ್ ಷನ್ ಸೊಸೈಟಿಯ ಯೋಜನಾ ನಿರ್ದೇಶಕರಾದ ಪದ್ಮ ಬಸವಂತಪ್ಪ ಅವರು ಮಾತನಾಡಿ,
ಕರ್ನಾಟಕದಲ್ಲಿ ಒಟ್ಟು 442 ಸ್ಟ್ಯಾಂಡ್ – ಅಲೋನ್ ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 94 ಆ್ಯಂಟಿರೆಟ್ರೋ ವೈರಲ್ ಥೆರಫಿ ( ಎ.ಆರ್.ಟಿ) ಕೇಂದ್ರಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕೆಲವು ಖಾಸಗಿ ವೈದ್ಯಕೀಯ ವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ 290 ಉಪ ಎ ಆರ್ ಟಿ ಕೇಂದ್ರಗಳು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಸಿ. ಹೆಚ್. ಚಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐ.ಇ.ಸಿ ಸಾಮಗ್ರಿಗಳ ಬಿಡುಗಡೆ ಮಾಡಲಾಯಿತು. ಏಡ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದ ವತಿಯಿಂದ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.
ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪಿ. ಸಿ ಕುಮಾರಸ್ವಾಮಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಡಾ. ವಸಂತ್ ಕುಮಾರ್ ಕೆ, ಮೂಡದ ಮಾಜಿ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಆರ್. ದ್ರಾಕ್ಷಯಿಣಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ಮೊಹಮ್ಮದ್ ಶಿರಾಜ್ ಅಹಮ್ಮದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ವಿಭಾಗೀಯ ಸಹ ನಿರ್ದೇಶಕರಾದ ಡಾ. ಮಲ್ಲಿಕಾ ಬಿ. ಮತ್ತಿತರು ಉಪಸ್ಥಿತರಿದ್ದರು.

