ಮೈಸೂರು: ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಕಾರ್ಯಸಿದ್ಧಿ ಆಂಜನೇಯನ ಮಹತ್ವ ಮತ್ತು ರಾಮಾಯಣದ ಹಿನ್ನೆಲೆಯನ್ನು ವಿವರಿಸಿದರು.
ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕಿಕೊಡುವಂತೆ ಹನುಮಂತನಿಗೆ ಕೇಳಿಕೊಂಡಾಗ ಮತ್ತು ಲಂಕಾ ಪ್ರವೇಶದ ನಂತರ ಸೀತೆಯು ಶ್ರೀರಾಮನನ್ನು ಸೇರಿಸುವಂತೆ ಹನುಮಂತನನ್ನು ಕೋರಿದಾಗ, ಇಬ್ಬರೂ “ನನ್ನ ಕಾರ್ಯಸಿದ್ಧಿ ಮಾಡಿಕೊಡು” ಎಂದು ಹನುಮಂತನನ್ನೇ ಪ್ರಾರ್ಥಿಸಿದ್ದರು. ಹಾಗಾಗಿ ಹನುಮಂತನು ಭಕ್ತರ ಪಾಲಿನ ‘ಕಾರ್ಯಸಿದ್ಧಿ ಹನುಮಂತ’ನಾಗಿದ್ದಾನೆ ಎಂದು ಶ್ರೀಗಳು ತಿಳಿಸಿದರು.
ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆ ಆರು ಬಾರಿ ಹನುಮ ಜಯಂತಿ ಬರುತ್ತದೆ. ಆದರೆ ದತ್ತಪೀಠದಲ್ಲಿರುವ ಹನುಮಂತನು ವಿಶೇಷವಾಗಿದ್ದು, ಆಕಾಶ, ಭೂಮಿ ಮತ್ತು ಪಾತಾಳ ಹೀಗೆ ಮೂರು ಲೋಕಗಳನ್ನು ಪ್ರತಿನಿಧಿಸುವ ವಿಶ್ವರೂಪವನ್ನು ಹೊಂದಿದ್ದಾನೆ.
ದಶಕಂಠ ರಾವಣ, ಶತಕಂಠ ಮತ್ತು ಪಾತಾಳ ರಾವಣ (ಮೈರಾವಣ) ಎಂಬ ಮೂವರು ರಾವಣರನ್ನು ಸಂಹರಿಸಿ, ಆ ಅಸುರರಿಗೆ ಮುಕ್ತಿಯನ್ನು ನೀಡಿ ತನ್ನಲ್ಲೇ ಐಕ್ಯ ಮಾಡಿಕೊಂಡ ಸಂಕೇತವಾಗಿ ಇಲ್ಲಿನ ವಿಗ್ರಹವಿದೆ ಎಂದು ತಿಳಿಸಿದರು.
ಇಲ್ಲಿ ‘ಫಲ ಸಮರ್ಪಣೆ’ ಮಾಡುವುದು ಅತ್ಯಂತ ಪ್ರಸಿದ್ಧ ವ್ರತವಾಗಿದ್ದು, ಭಕ್ತರು ಕೇವಲ ಒಂದು ತೆಂಗಿನ ಕಾಯಿ ಸಮರ್ಪಿಸಿದರೆ ಸಾಕು, ಹನುಮಂತನು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಿದರು.
ಜಗತ್ತಿನಲ್ಲಿ ಯುದ್ಧದ ಭೀತಿ ತೊಲಗಿ, ಎಲ್ಲೆಡೆ ಶಾಂತಿ ನೆಲೆಸಲಿ ಮತ್ತು ಸಮಸ್ತ ಜನರಿಗೂ ಒಳಿತಾಗಲಿ ಎಂದು ಈ ಶುಭದಿನದಂದು ಸ್ವಾಮೀಜಿ ಪ್ರಾರ್ಥಿಸಿದರು.
ಭಕ್ತರು ಜೈ ವೀರ ಹನುಮಾನ್ ಎಂಬ ಘೋಷಣೆ ಕೂಗುತ್ತಾ ಪ್ರಾರ್ಥನೆ ಮಾಡಿದರು.
ಗರ್ ವಾಪಸಿ:
ಇದೆ ವೇಳೆ ಚಾಮರಾಜನಗರ, ಗುಂಡ್ಲುಪೇಟೆ ಮತ್ತಿತರ ಕಡೆಯಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದವರು ಇಂದು ಸ್ವಾಮೀಜಿಯವರ ಸಮ್ಮುಖದಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸಾಗಿದ್ದು ನಿಜಕ್ಕೂ ವಿಶೇಷವಾಗಿತ್ತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ವಾಪಸಾದವರೆಲ್ಲರಿಗೂ ಆಶೀರ್ವಾದ ನೀಡಿ,ಪ್ರತಿದಿನ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ದೇವರಿಗೆ ನಮಸ್ಕರಿಸಬೇಕೆಂದು ಸಲಹೆ ನೀಡಿದರು.
ಒಂದು ವೇಳೆ ದೇವಸ್ಥಾನಕ್ಕೆ ಹೋಗಲಾಗದೇ ಇದ್ದರೆ ನಾವೇ ಒಂದು ದೇವಸ್ಥಾನವನ್ನೇ ಕಟ್ಟೋಣ ಎಂದು ನುಡಿದರು.
ಈ ವೇಳೆ ಶ್ರೀಗಳು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿ ಆಶೀರ್ವದಿಸಿದರು.

