ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಬಾಂಧವರು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸಿದರು.
ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಬುಧವಾರ ಮಧ್ಯ ರಾತ್ರಿಯಿಂದ ಗುರುವಾರದ ಮುಂಜಾನೆವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಪಾರಂಪರಿಕ ತಾಣ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಬುಧವಾರ ಸಂಜೆಯಿಂದಲೇ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ದೊಡ್ಡ ಭಕ್ತಸಾಗರವೇ ನೆರೆದಿತ್ತು.
ಕ್ರೈಸ್ತರು ಮಾತ್ರವಲ್ಲದೇ ಎಲ್ಲ ಧರ್ಮೀಯರೂ ಸಂಭ್ರಮ,ಖುಷಿ ಹಂಚಿಕೊಂಡರು
ರಾತ್ರಿ ೧೧.೩೦ರಿಂದ ೧೨ರ ವರೆಗೆ ಕ್ಯಾರೋಲ್ ಗೀತಗಾಯನ ಚರ್ಚ್ ನೊಳಗೆ ಪ್ರತಿಧ್ವನಿಸಿತು. ಚರ್ಚ್‌ನಲ್ಲಿ ವಿಶೇಷ ದೀಪದ ಬೆಳಕಿನ ಅಲಂಕಾರದ ಜತೆಗೆ ಬಣ್ಣ ಬಣ್ಣದ ತಳಿರು ತೋರಣಗಳ ಸೊಬಗು ಕಂಗೊಳಿಸುತ್ತಿತ್ತು.
ಕೊರೆಯುವ ಮಾಗಿಯ ಚಳಿಯ ನಡುವೆಯೇ ಚರ್ಚ್‌ನ ಒಳಗೆ-ಹೊರಗೆ ಸಾವಿರಾರು ಕ್ರೈಸ್ತ ಬಾಂಧವರು ಏಸು ಕ್ರಿಸ್ತನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಅವರು ಚರ್ಚ್‌ನ ಪರಿವಾರದೊಂದಿಗೆ ಛತ್ರಿ- ಚಾಮರಗಳ ಹಿಮ್ಮೇಳದೊಂದಿಗೆ ಶುಭ್ರ ಬಿಳಿವಸ್ತ್ರದಲ್ಲಿದ್ದ ಬಾಲಯೇಸುವಿನ ಪುಟ್ಟ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ತಂದರು.
ದೇವರ ಮೂರ್ತಿ ಹೊರಬರುತ್ತಿದ್ದಂತೆಯೇ ನೂರಾರು ಜನರು ಪಾದವನ್ನು ಮುಟ್ಟಿ ನಮಸ್ಕರಿಸಿದರು. ಎಲ್ಲರ ಘೋಷಣೆ, ಹಾಡು, ಸಂಗೀತದ ಹರಕೆಯ ನಡುವೆಯೇ ಗೋದಲಿಯಲ್ಲಿ ಬಾಲ ಏಸುವನ್ನು ರಾತ್ರಿ ಹನ್ನೆರಡಕ್ಕೆ ತಂದು ಪ್ರತಿಷ್ಠಾಪನೆ ಮಾಡಿದರು.
ಬಿಷಪ್ ಫ್ರಾನ್ಸಿಸ್ ಸೆರಾವೊ ಅವರ ನೇತೃತ್ವದಲ್ಲಿ ಹತ್ತಾರು ಪಾದ್ರಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

