ಮೈಸೂರು ಅರಮನೆ ಆವರಣದಲ್ಲಿ ನೈಟ್ರೊಜನ್ ಸಿಲಿಂಡರ್ ಸ್ಪೋಟ: ಇಬ್ಬರು ಬ*ಲಿ

ಮೈಸೂರು: ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಗುರುವಾರ ರಾತ್ರಿ ಘೋರ ದುರಂತ ಸಂಭವಿಸಿದ್ದು,ಇಡೀ ನಗರದ ಜನತೆ ತೀವ್ರ ಆತಂಕಗೊಂಡಿದ್ದಾರೆ.

ಇಂದು ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ನಗರದ ಜನತೆ ಜೊತೆಗೆ ಬೇರೆ ಊರುಗಳಿಂದ ಬಂದವರು ಪ್ರವಾಸಿಗರು ಸಾಕಷ್ಟು ಮಂದಿ ಅರಮನೆಯ ವಿದ್ಯುತ್ ದೀಪಾಲಂಕಾರ ಮತ್ತು ಮಾಗಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಧಾವಿಸಿದ್ದರು.

ಪುಟ್ಟ ಮಕ್ಕಳಂತೂ ಬಹಳಷ್ಟು ಮಂದಿ ಸೇರಿದ್ದರು. ಅರಮನೆಯ ಬಣ್ಣದ ವಿದ್ಯುತ್ ದೀಪಾಲಂಕಾರವನ್ನು ನೋಡುತ್ತಾ ಬಣ್ಣ ಬಣ್ಣದ ಆಟಿಕೆಗಳನ್ನು ಕೊಂಡು ಖುಷಿಯಿಂದ ಕುಣಿದಾಡುತ್ತಿದ್ದರು.

ಹೀಗೆ ಸಂಭ್ರಮದಲ್ಲಿ ತುಂಬಿದ್ದ ಅರಮನೆ ಆವರಣದಲ್ಲಿ ಏಕಾಏಕಿ ಭಾರೀ ಸ್ಪೋಟ ಕೇಳಿದ ತಕ್ಷಣ ಜನತೆ ಅಡ್ಡಾದಿಡಿಯಾಗಿ ಹೊರಗೆ ಓಡಲು ಧಾವಿಸಿದರು.

ಆಗಿದ್ದಿಷ್ಟೇ ವ್ಯಕ್ತಿಯೊಬ್ಬ ಪುಟ್ಟ ಮಕ್ಕಳನ್ನು ಆಕರ್ಷಿಸುವ ಬಲೂನುಗಳನ್ನು ಸೈಕಲ್ ನಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಏನಾಯಿತೊ ಏನೋ, ಏಕಾಯಕಿ ಸಿಲಿಂಡರ್ ಮತ್ತು ಬಲೂನ್ ಎರಡೂ ಭಾರೀ ಸ್ಪೋಟಗೊಂಡಿವೆ.

ಇದರಿಂದಾಗಿ ಬಲೂನ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಭೀಕರವಾಗಿ ಮೃತಪಟ್ಟಿದ್ದಾರೆ.ಸಮೀಪದಲ್ಲಿದ್ದ ಮತ್ತೊಬ್ಬರು ಕೂಡಾ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇಬ್ಬರು ಮಕ್ಕಳು‌ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ನಗರದ ಕೆ.ಅರ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕೆ ಕೃಷ್ಣರಾಜ ಠಾಣೆ ಪೊಲೀಸರು ಮತ್ತು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್,
ಡಿಸಿಪಿಗಳಾದ ಬಿಂದುಮಣಿ ಮತ್ತು ಸಿಬ್ಬಂದಿ ದಾವಿಸಿ‌ ಪರಿಶೀಲಿಸಿದರು.