ಆಕಸ್ಮಿಕ ಬೆಂಕಿಗೆ ಗುಜರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪದಾರ್ಥ ನಾಶ

ಮೈಸೂರು: ಗುಜರಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಪದಾರ್ಥ ಸುಟ್ಟು ನಾಶವಾದ ಘಟನೆ ಮೈಸೂರು ಜಿಲ್ಲೆ, ನಂಜನಗೂಡಿನ ಶಂಕರಪುರ ಬಡಾವಣೆಯಲ್ಲಿ ನಡೆದಿದೆ.

ಮುಂಜಾನೆ ಸುಮಾರು 2 ಗಂಟೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಗುಜರಿ ವ್ಯಾಪಿಸಿ ಎಲ್ಲವನ್ನೂ ನಾಶ ಮಾಡಿದೆ.

ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ,ಆದರೆ ಪದಾರ್ಥಗಳು ಸುಟ್ಟು ಹೋಗಿದ್ದವು.

ನಾಸಿರ್ ಎಂಬ ವ್ಯಕ್ತಿಗೆ ಸೇರಿದ ಗುಜರಿ ನಾಶವಾಗಿದೆ. ಗುಜರಿ ಸಮೀಪವೇ ವಾಸದ ಮನೆಗಳಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಇಂತಹ ಗುಜರಿಗಳಿಗೆ ಅನುಮತಿ ನೀಡುವ ಮುನ್ನ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.