ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಪರಿಶೀಲಿಸಿ: ಯುಕೇಶ್ ಕುಮಾರ್

ಮೈಸೂರು: ಕಾಲ ಕಾಲಕ್ಕೆ ನೀರಿನ ಪೈಪ್ ಲೈನ್ ಗಳನ್ನು ಪರಿಶೀಲಿಸಿ,ಒಡೆದ ಪೈಪ್ ಗಳನ್ನು ತಕ್ಷಣವೆ ಸರಿಪಡಿಸಬೇಕು ಎಂದು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ನೀರಿನ ಅಭಾವ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ ನಿಮ್ಮ ಹಂತದಲ್ಲೇ ಸಮಸ್ಯೆ ಸರಿಪಡಿಸಿಕೊಳ್ಳಬೇಕೆಂದು ಆದೇಶಿಸಿದರು.

ನೀರಿನ ಸಮಸ್ಯೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಹದಿನಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹದಿನಾರುಮೋಳೆ, ಬಿಳಿಗೆರೆ ಗ್ರಾಮ ಪಂಚಾಯತಿಯ ಕುಪ್ಪರವಳ್ಳಿ ಹಾಗೂ ಕಾಮಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿ ಯುಕೇಶ್ ಕುಮಾರ್ ಮಾತನಾಡಿದರು.

ನೀರು ಬಿಡುವ ಅವಧಿಯನ್ನು ನಿಗಧಿ ಪಡಿಸಿ, ಸರಿಯಾದ ಸಮಯಕ್ಕೆ ವಾಟರ್ ಮೆನ್ ಮೂಲಕ ನೀರು ಪೂರೈಸಬೇಕು. ಈಗ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಸ್ಥಳೀಯ ಹಬ್ಬ ಗಳು ಜರುಗುತ್ತಿವೆ ಹಾಗಾಗಿ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಅತ್ಯಮೂಲ್ಯ ವಾದ ನೀರನ್ನು ಪ್ರತಿಯೊಬ್ಬರು ಹಿತಮಿತವಾಗಿ ಬಳಸಬೇಕು, ಸಮರ್ಪಕವಾಗಿ ಉಪಯೋಗಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತಲೆ ದೂರುವುದಿಲ್ಲ ಎಂದು ಜನರಿಗೂ ಯುಕೇಶ್ ಕುಮಾರ್ ತಿಳಿಹೇಳಿದರು.

ಹಲವು ಮನೆಗಳಲ್ಲಿ ನಲ್ಲಿಪೈಪ್ ಗಳಿಗೆ ಮೋಟಾರ್ ಗಳನ್ನು ಅಳವಡಿಸಿ ಕೊಂಡಿರುವುದರಿಂದ ಎಲ್ಲಾ ಮನೆಗಳಿಗೆ ಸಮರ್ಪಕವಾಗಿ ನೀರು ಬರುತಿಲ್ಲ ಎಂದು ಕೆಲವರು ಅಳಲು ತೋಡಿಕೊಂಡರು.

ನಂಜನಗೂಡು ಹಾಗೂ ವರುಣ ಕ್ಷೇತ್ರದ 62 ಹಳ್ಳಿಗಳಿಗೆ ನೀರು ಪೂರೈಸಬಹುದಾದಾ ದೊಡ್ಡ ಕವಲಂದೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಪುನಃಚೇತನ ಕಾಮಗಾರಿಯ ಪ್ರಗತಿಯ ಬಗ್ಗೆ ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್,ಗ್ರಾಮೀಣ ನೀರು ಸರಬರಾಜು ಕಾರ್ಯ ಪಾಲಕ ಅಭಿಯಂತರರಾದ ರಾಮಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮನು, ಕಿರಿಯ ಸಹಾಯಕ ಅಭಿಯಂತರರಾದ ಪ್ರವೀಣ್, ಹದಿನಾರು ಪಿಡಿಒ ಪ್ರದೀಪ್, ಬಿಳಿಗೆರೆ ಪಿಡಿಒ ಗಣೇಶ್ ಮತ್ತಿತರ ಸಿಬ್ಬಂದಿ ಹಾಜರಿದ್ದರು.