ಮೈಸೂರು: ಭಾರಿಗಾತ್ರದ ಬೇವಿನ ಮರ ಧರೆಗುರುಳಿದ್ದು ಒಂದು ಕಾರು, ಆಟೋ, ಬೈಕ್ ಜಖಂಗೊಂಡಿವೆ.
ಯಾವುದೇ ಜೀವಹಾನಿಯಾಗಿಲ್ಲ.ನಗರದ ನಗರ ಕೇಂದ್ರ ಗ್ರಂಥಾಲಯದ ಮುಂಭಾಗದ, ಸಂಭ್ರಮ ಹೋಟೆಲ್ ಮತ್ತು ಬಾರ್‌ನ ಕಾಂಪೌಂಡ್ ಒಳಗಡೆಯಿದ್ದ ಬೃಹತ್‌ಗಾತ್ರದ ಹಳೆಯ ಬೇವಿನ ಮರ ಏಕಾಏಕಿ ನೆಲಕ್ಕುರಳಿದೆ. ಬೇರುಗಳಲ್ಲಿ ಸತ್ವ ಇಲ್ಲದ ಕಾರಣ ಮರಬಿದ್ದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಮೂರ‍್ನಾಲ್ಕು ದಿನಗಳ ಹಿಂದೆ ಧಾರಕಾರ ಮಳೆ ಬಿದ್ದಿದ್ದರಿಂದ ಮರದ ಬೇರುಗಳು ಸಡಿಲಗೊಂಡಿದ್ದವು. ಭಾರ ತಾಳಲಾದರೆ, ಚಿಗುರಿ ಹಸಿರಾಗಿದ್ದ ಮರ ನೆಲಕ್ಕುರಿಳಿದಿದೆ.
ಶನಿವಾರ ಮಧ್ಯಾಹ್ನ 3.30ರ ಸಮಯದಲ್ಲಿ ಮರ ಬಿದಿದ್ದು, ಪಕ್ಕದಲ್ಲೆ ಇದ್ದ ಕಾಂಪೌಂಡ್ ನೆಲಕ್ಕುರುಳಿದೆ, ಕಾಂಪೌಂಡ್ ಪಕ್ಕದಲ್ಲೇ ಆಟೋ ನಿಲ್ಲಿಸಲಾಗಿತ್ತು.
ಮರ ಬಿದ್ದು ಆಟೋ ನಜ್ಜುಗುಜ್ಜಾಗಿದೆ. ಬೈಕ್‌ನಲ್ಲಿ ಸವಾರರೊಬ್ಬರು ರಸ್ತೆಯಲ್ಲಿ ಹೋಗುವಾಗ, ಮರದ ರೆಂಬೆಗಳು ಬೈಕ್ ಮೇಲೆ ಬಿದ್ದಿವೆ. ಸವಾರರಿಗೆ ತಲೆಗೆ ಸಣ್ಣ ಗಾಯವಾಗಿದ್ದು, ಕೂಡಲೇ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಇದೇ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಹೊಸ ಸ್ವಿಫ್ಟ್ ಕಾರ್ ಮೇಲೆ ಮರಬಿದ್ದಿದೆ. ಬಿದ್ದ ರಬಸಕ್ಕೆ ಕಾರಿನ ಮೇಲ್ಬಾಗ, ಹಿಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನ ಎಲ್ಲ ಗ್ಲಾಸ್‌ಗಳು ಪುಡಿಪುಡಿಯಾಗಿವೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಮರದ ಕೆಳಭಾಗದಲ್ಲಿ ವಿದ್ಯುತ್ ಕಂಬಗಳಿದ್ದು, ಎರಡು ವಿದ್ಯುತ್ ಕಂಬಗಳು ಮುರಿದುಹೋಗಿವೆ. ವಿದ್ಯುತ್ ತಂತಿಗಳು ತುಂಡಾದ ಪರಿಣಾಮ ತಕ್ಷಣವೇ ವಿದ್ಯುತ್ ವ್ಯತ್ಯಯವಾದ ಕಾರಣ ಭಾರಿ ಅನಾಹುತ ತಪ್ಪಿದೆ.
ಮರ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿ ಸವಾರರು ಕೆಲ ಸಮಯ ತೊಂದರೆ ಅನುಭವಿಸುವಂತಾಯಿತು.
ವಿಷಯ ತಿಳಿದು ಕೂಡಲೇ ಸಂಚಾರ ಪೊಲೀಸರು ಸ್ಥಳಕ್ಕೆ ಬಂದರು,ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಹಾಗೂ ಮೆಷಿನ್ ಮೂಲಕ ಮರ ತುಂಡರಿಸಿ ತೆರವುಗೊಳಿಸಿದರು. ಬಳಿಕ ವಾಹನ ಸವಾರರಿಗೆ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿಕೊಟ್ಟರು.

