ಮೈಸೂರು: ಅರಮನೆ ಸಮೀಪದ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಕೇಂದ್ರ ಸರ್ಕಾರದ ಸ್ವದೇಶ್ 2.0 ಯೋಜನೆಯಡಿ ಅರಮನೆ ಸಮೀಪ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು.
ಇದರ ಪರಿಣಾಮ ಫುಟ್ ಪಾತ್ ನಲ್ಲಿ ಜನರು ಸಂಚರಿಸಲು ಸಾಧ್ಯವಾಗದೆ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯ ನಿರ್ಮಾಣವಾಗಿತ್ತು.
ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪಾದಚಾರಿ ರಸ್ತೆಯಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದರು.
ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದುದರಿಂದ ಇಕ್ಕಟ್ಟಿಗೆ ಸಿಲುಕಿದ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಹಾಕಿದ್ದ ಅಡಿಪಾಯ ತೆರವುಗೊಳಿಸಿದ್ದಾರೆ.

