ಅಡಿಕೆ ಹೊಂಬಾಳೆ ಕದಿಯುವ ಕಳ್ಳರಿದ್ದಾರೆ!

ಮೈಸೂರು: ಕಳ್ಳರು ಸಾಮಾನ್ಯವಾಗಿ ಆಭರಣ,ಹಣ ಕದ್ದೊಯ್ಯೋದು ಮಾಮೂಲು ಸಂಗತಿ.ಆದರೆ ಮೈಸೂರು ಸಮೀಪದ ಗ್ರಾಮವೊಂದರಲ್ಲಿ ನೂರಾರು ಅಡಿಕೆ ಮರಗಳ ಹೋಂಬಾಳೆ ಕದ್ದಿದ್ದಾರೆ.

ಇದು ವಿಚಿತ್ರ ಕಳವು.ಆದರೂ ನಿಜಾ.ಈ ಘಟನೆ ಮೈಸೂರು ಸಮೀಪದ ಕಳಲವಾಡಿಯಲ್ಲಿ ನಡೆದಿದೆ.

ಕಳಲವಾಡಿ ಗ್ರಾಮದ ರೈತ ರವೀಂದ್ರರೆಡ್ಡಿ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಕಳ್ಳರು ಸರಣಿ ಕಳವು ಮಾಡಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಸುಮಾರು 390ಕ್ಕೂ ಹೆಚ್ಚು ಅಡಿಕೆ ಮರಗಳ ಹೋಂಬಾಳೆಯನ್ನು ಕತ್ತರಿಸಿ ಕೊಂಡೊಯ್ದಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 200 ಅಡಿಕೆ ಮರಗಳ ಹೋಂಬಾಳೆಯನ್ನು ಕತ್ತರಿಸಿಕೊಂಡು ಹೋಗಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಹೋದ ನಂತರವೂ ಇದೇ ಕೃತ್ಯ ಮುಂದುವರಿದಿದೆ.

ಮತ್ತೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು 100 ಮರಗಳ ಹೋಂಬಾಳೆಯನ್ನು ಕತ್ತರಿಸಿದ್ದಾರೆ.ನಿನ್ನೆ ರಾತ್ರಿ ಮತ್ತೆ ತೋಟಕ್ಕೆ ನುಗ್ಗಿ ಸುಮಾರು 90 ಮರಗಳ ಹೋಂಬಾಳೆಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ.

ಮೂರು ದಿನಗಳಲ್ಲಿ ಒಟ್ಟು ಸುಮಾರು 390 ಅಡಿಕೆ ಮರಗಳ ಹೋಂಬಾಳೆ ನಾಶವಾಗಿದ್ದು, ತೋಟದ ಮಾಲೀಕ ರವೀಂದ್ರರೆಡ್ಡಿ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಅಡಿಕೆ ಮರಗಳ ಬೆಳವಣಿಗೆ ಹಾಗೂ ಮುಂದಿನ ಇಳುವರಿಗೆ ಹೋಂಬಾಳೆ ಅತ್ಯಂತ ಪ್ರಮುಖ. ಇದನ್ನು ಕತ್ತರಿಸುವುದರಿಂದ ಮರಗಳ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಇಳುವರಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳ್ಳತನವಾಗಿರುವ ಹೋಂಬಾಳೆಗಳನ್ನು ಮದುವೆ, ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಹೂವಿನ‌ ಅಲಂಕಾರಕ್ಕೂ ಬಳಸುತ್ತಾರೆ, ಹೊಂಬಾಳೆಯನ್ನು ಕಡಿಮೆ ಮಾರಾಟ ಮಾಡುತ್ತಾರೆ,ಇದರಿಂದ ಇಂತಹ ಕೃತ್ಯಗಳಿಗೆ ಉತ್ತೇಜನ ಸಿಗುತ್ತಿದೆ.ಹಾಗಾಗಿ ಕದ್ದವರಿಗೂ ಕಳ್ಳತನದ ವಸ್ತುಗಳನ್ನು ಖರೀದಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಪೊಲೀಸರ ಭೇಟಿ ಬಳಿಕವೂ ಸತತವಾಗಿ ಎರಡು ರಾತ್ರಿ ಕಳ್ಳತನ ನಡೆದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಳಲವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಿ, ಕಳ್ಳರ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.

ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.