ಅಮೆರಿಕದಲ್ಲಿ ಗಣಪತಿ ಶ್ರೀಗಳ ನೇತೃತ್ವದಲ್ಲಿ ಭವ್ಯ ಶ್ರೀಮದ್ಭಗವದ್ಗೀತಾ ಪಾರಾಯಣ

ಡಲ್ಲಾಸ್ (ಅಮೆರಿಕ): ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅಮೆರಿಕದ 50 ವರ್ಷಗಳ ಸುವರ್ಣ ಆಧ್ಯಾತ್ಮಿಕ ಯಾತ್ರೆಯ ಸುಸಂದರ್ಭದಲ್ಲಿ, ಅವರ ದಿವ್ಯ ನೇತೃತ್ವದಲ್ಲಿ ಬೃಹತ್ ಸಾಮೂಹಿಕ ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ಮಹೋತ್ಸವ ಶ್ರದ್ಧಾ-ಭಕ್ತಿಗಳಿಂದ ನೆರವೇರಿತು.

ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿರುವ ‘CUTEX’ ಆಡಿಟೋರಿಯಂನಲ್ಲಿ ಜರುಗಿದ ಈ ಐತಿಹಾಸಿಕ ಸಮಾವೇಶದಲ್ಲಿ ವಿಶ್ವದ 18 ದೇಶಗಳ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.

ಅತ್ಯಂತ ಶಿಸ್ತು ಮತ್ತು ಸಮರ್ಪಣಾಭಾವದಿಂದ ಸಾವಿರಾರು ವಿದ್ಯಾರ್ಥಿಗಳು ನೆರವೇರಿಸಿದ ಸಂಪೂರ್ಣ ಗೀತಾ ಪಾರಾಯಣವು ಸಭಾಸದರನ್ನು ಮಂತ್ರಮುಗ್ಧರನ್ನಾಗಿಸಿತು.

ವಿಶ್ವಶಾಂತಿ ಹಾಗೂ ಲೋಕಕಲ್ಯಾಣದ ಸಂಕಲ್ಪ: ವಿಶ್ವಕಲ್ಯಾಣ ಮತ್ತು ಜಾಗತಿಕ ಶಾಂತಿಯ ಮಹತ್ ಸಂಕಲ್ಪದೊಂದಿಗೆ ಈ ಭಗವದ್ಗೀತಾ ಪಾರಾಯಣವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಭಾಗವಾಗಿ ಶ್ರೀ ಸ್ವಾಮೀಜಿಯವರು “ವಿಶ್ವ ಶಾಂತಿಗಾಗಿ ಪ್ರಾರ್ಥನೆ”ಯನ್ನು ನೆರವೇರಿಸಿ, ಭಾಗವಹಿಸಿದ್ದ ಎಲ್ಲಾ ಭಕ್ತರಿಗೂ ಭಗವಾನ್ ಶ್ರೀಕೃಷ್ಣನ ಅನುಗ್ರಹ ಸಿಗಲಿ ಎಂದು ಆಶೀರ್ವದಿಸಿದರು.

ಧರ್ಮದ ಶಾಶ್ವತ ಧ್ವನಿ ಭಗವದ್ಗೀತೆ:
ಸಭೆಯನ್ನುದ್ದೇಶಿಸಿ ದಿವ್ಯಾನುಗ್ರಹ ಭಾಷಣ ಮಾಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, “ಭಗವದ್ಗೀತೆಯು ಧರ್ಮ ಮತ್ತು ನೀತಿಯ ಶಾಶ್ವತ ಧ್ವನಿಯಾಗಿದೆ ಎಂದು ತಿಳಿಸಿದರು.

ಮಾನವಕುಲವು ಜೀವನದಲ್ಲಿ ಹೇಗೆ ಬದುಕಬೇಕು, ಹೇಗೆ ಯೋಚಿಸಬೇಕು ಮತ್ತು ಯಾವ ಮಾರ್ಗದಲ್ಲಿ ನಡೆದುಕೊಳ್ಳಬೇಕು ಎಂಬುದನ್ನು ಗೀತೆ ಬೋಧಿಸುತ್ತದೆ. ಸವಾಲುಗಳನ್ನು ಎದುರಿಸುತ್ತಾ ಮನಸ್ಸಿನಲ್ಲಿ ಶಾಂತಿ ಹಾಗೂ ಸಮಾಧಾನವನ್ನು ಕಾಯ್ದುಕೊಳ್ಳುವ ಕಲೆಯನ್ನು ನಮಗೆ ಕಲಿಸಿಕೊಡುತ್ತದೆ. ಭಗವದ್ಗೀತೆಯು ಇಡೀ ಮಾನವಕುಲಕ್ಕೆ ಸೇರಿದ ಅಮೂಲ್ಯ ಆಧ್ಯಾತ್ಮಿಕ ಆಸ್ತಿಯಾಗಿದೆ ಎಂದು ಬಣ್ಣಿಸಿದರು.

ವಸುದೈವ ಕುಟುಂಬಕಂ ಸಂದೇಶ:
ನಾವು ‘ವಸುದೈವ ಕುಟುಂಬಕಂ’ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಉದಾತ್ತ ತತ್ವವನ್ನು ಪಾಲಿಸಬೇಕು. ಪ್ರತಿಯೊಂದು ಕುಟುಂಬದಲ್ಲೂ ಸುಖ-ಶಾಂತಿ ನೆಲೆಸಿದಾಗ ಮಾತ್ರ ವಿಶ್ವಶಾಂತಿ ಸಾಧ್ಯ. ಪ್ರತಿಯೊಂದು ಹೃದಯದಲ್ಲಿ ಪ್ರೀತಿ, ಮನಸ್ಸಿನಲ್ಲಿ ಜ್ಞಾನ ಮತ್ತು ಕುಟುಂಬಗಳಲ್ಲಿ ಏಕತೆ ಮೂಡಬೇಕು. ಭಗವದ್ಗೀತೆಯ ಸಂದೇಶದ ಮೂಲಕ ಸಮಾಜದಲ್ಲಿ ಧರ್ಮ, ಸೇವೆ, ಕರುಣೆ ಹಾಗೂ ಮಾನವೀಯತೆ ಬೆಳೆಯಬೇಕು ಎಂದು ಶ್ರೀಗಳು ಕರೆ ನೀಡಿದರು.

ವಿಶ್ವದ ಎಲ್ಲಾ ರಾಷ್ಟ್ರಗಳು ಪರಸ್ಪರ ಗೌರವ, ಸಹಕಾರ ಮತ್ತು ಸ್ನೇಹಭಾವದಿಂದ ಒಟ್ಟಾಗಿ ಬಾಳಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.

ಕಾರ್ಯಕ್ರಮದ ಮುಕ್ತಾಯದಲ್ಲಿ ಶ್ರೀ ಸ್ವಾಮೀಜಿಯವರು “ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ಪವಿತ್ರ ಮಂತ್ರದೊಂದಿಗೆ ಜಗತ್ತಿನ ಎಲ್ಲಾ ಜೀವಿಗಳಿಗೂ ಸುಖ, ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ ಆಶೀರ್ವದಿಸಿದರು.