ಶೀಘ್ರದಲ್ಲೇ ಸಿ ಎಂ ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರ್ಕೆಟ್ ವೀಕ್ಷಣೆ:ತನ್ವೀರ್ ಸೇಠ್

ಮೈಸೂರು ಅ.1: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ನಗರಕ್ಕೆ ಭೇಟಿ ನೀಡಿ ಐತಿಹಾಸಿಕ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆಯನ್ನು ಖುದ್ದು ವೀಕ್ಷಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ನಗರದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ರಸ್ತೆಯ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮೈಸೂರಿನ ಅಭಿವೃದ್ಧಿ ಕುರಿತು ಚರ್ಚಿಸಿದ್ದೇನೆ ಎಂದು ಹೇಳಿದರು.

ಮೈಸೂರಿನ ಅಳಿಯನಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿಕೊಟ್ಟ ಅಭಿವೃದ್ಧಿ ಹಾದಿಯಲ್ಲೇ ಸಾಗುವ ಚಿಂತನೆ ಅವರಿಗಿದೆ. ಈ ಹಿನ್ನೆಲೆಯಲ್ಲಿ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ಸಮಸ್ಯೆಯನ್ನು ತಾವೇ ಬಂದು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತನ್ವೀರ್ ಮಾಹಿತಿ ನೀಡಿದರು.

ನ್ಯಾಯಾಲಯದ ಆದೇಶದನ್ವಯ ಸರ್ಕಾರದಿಂದ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದಸರಾ ಸಂದರ್ಭದಲ್ಲಿ ಅಥವಾ ನಂತರ ಮೈಸೂರು ಜನತೆಗೆ ಕೊಡುಗೆಯಾಗಿ ಈ ಕೆಲಸ ಆಗಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ದೇವರಾಜ ಮತ್ತು ವಿನೋಬಾ ಮಾರುಕಟ್ಟೆ ನವೀಕರಣದ ಜೊತೆಗೆ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಮಾರುಕಟ್ಟೆಗಳ ನಿರ್ಮಾಣಕ್ಕೂ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಿದರು.

ಮಹಾತ್ಮ ಗಾಂಧಿ ನಗರ ಪುನಶ್ಚೇತನ ಯೋಜನೆ, ರಾಷ್ಟ್ರೀಯ ಹಸಿರು ಯೋಜನೆ ಮತ್ತು ಒಳಚರಂಡಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದ ಆರೋಪದಲ್ಲಿ ಹುರುಳಿಲ್ಲ. ಎಲ್ಲಾ ಕ್ಷೇತ್ರಗಳ ಶಾಸಕರಿಗೂ ಅಗತ್ಯ ಅನುದಾನ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾರಾಣಿ ಕಾಲೇಜು, ವಿದ್ಯಾರ್ಥಿ ನಿಲಯ, ಆರೋಗ್ಯ ಕ್ಷೇತ್ರದ ಕಟ್ಟಡಗಳು ಸೇರಿದಂತೆ ಮೈಸೂರಿಗೆ ಅನೇಕ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ. ಅವರ ಹಾದಿಯಲ್ಲೇ ಮೈಸೂರಿನ ಅಳಿಯನಾಗಿ ಡಿಕೆಶಿ ಅವರು ಕೆಲಸ ಮುಂದುವರಿಸಲಿದ್ದಾರೆರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಅತಿ ಹೆಚ್ಚು ವಿವಾದಕ್ಕೆ ಕಾರಣವಾಗಿದ್ದ ಪೊಲೀಸ್ ಅಕಾಡೆಮಿ ರಸ್ತೆ (ಫೋರಂ ಮಾಲ್ ನಿಂದ ಎಸ್‌ಪಿ ವೃತ್ತದವರೆಗೆ) ಅಗಲೀಕರಣ ವೇಳೆ 40 ಮರಗಳನ್ನು ತೆರವು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಪರ್ಯಾಯವಾಗಿ 126 ಸಸಿಗಳನ್ನು ನೆಟ್ಟು, ರಸ್ತೆ ಅಗಲೀಕರಣವನ್ನು ತ್ವರಿತವಾಗಿ ಪೂರ್ಣಗೊಳಿಸಿ ಈಗ ವಿದ್ಯುತ್ ದೀಪಗಳನ್ನು ಅಳವಡಿಸಿ ಲೋಕಾರ್ಪಣೆ ಮಾಡಲಾಗಿದೆ. ಇದಲ್ಲದೆ ನಗರದ 7 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಂಬೇಡ್ಕರ್ ವೃತ್ತದಿಂದ ಫೌಂಟೇನ್ ವೃತ್ತದವರೆಗಿನ ನೂರು ಅಡಿ ರಸ್ತೆ ಅಗಲೀಕರಣಕ್ಕೆ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಜಾಗ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತನ್ವೀರ್ ಸೇಠ್ ವಿವರಿಸಿದರು.

ದಸರಾದಲ್ಲಿ 22 ಸಚಿವರಿಗೆ ಒಂದೊಂದು ಇಲಾಖೆಯ ಜವಾಬ್ದಾರಿ ನೀಡಿರುವುದು ಅಧಿಕಾರಿಗಳನ್ನು ಚುರುಕುಗೊಳಿಸಲು ಮತ್ತು ಹಬ್ಬಕ್ಕೆ ಮೆರುಗು ತರಲು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕಾರಕ್ಕೆ ಯಾವುದೇ ಕುಂಠಿತವಾಗುವುದಿಲ್ಲ ಎಂದು ಇದೇ ವೇಳೆ ಶಾಸಕರು ಸ್ಪಷ್ಟಪಡಿಸಿದರು.

ನಜರಬಾದ್ ದೇವಾಲಯದ ಬಳಿ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಅವರು, ದೇವಾಲಯಕ್ಕೆ 140 ಚದರ ಗಜ ಜಾಗ ಮಾತ್ರ ಮಂಜೂರಾಗಿದ್ದು, ಅರಳಿಮರ ಮತ್ತು ಪೂಜಾ ಗುಡಿಗೆ ಮಾತ್ರ ಬಳಕೆಗೆ ಷರತ್ತು ಇತ್ತು. ಆದರೆ ಹಲವರು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದರು. 8 ವರ್ಷದಿಂದ ವಿವಾದವಿದ್ದು, ಮರಾಠ ಸಮುದಾಯದ ಶಾಲೆಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಿಗದಿತ ಜಾಗವನ್ನು ಮಾತ್ರ ತೆರವು ಮಾಡಲಾಗಿದೆ. ಇದನ್ನು ರಾಜಕೀಯಕ್ಕೆ ಬಳಸಬೇಡಿ, ಯಾವುದೇ ಅನುಮಾನವಿದ್ದರೆ ದಾಖಲೆ ಸಮೇತ ಚರ್ಚೆಗೆ ಬನ್ನಿ ಎಂದು ತನ್ವೀರ್ ಸೇಠ್ ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ ನರಸಿಂಹರಾಜ ಬ್ಲಾಕ್ ಅಧ್ಯಕ್ಷರಾದ ಸಯ್ಯದ್ ಇಕ್ಬಾಲ್, ಸೈನ್ ಶಾ ಮೊಹಮ್ಮದ್, ಶಫ್ರಸ್ ಖಾನ್, ಘೋಷ್ ಬಾಬು ಮತ್ತಿತರರು ಹಾಜರಿದ್ದರು.