ಅರಮನೆಯಲ್ಲಿ ಖಾಸಗಿ ದರ್ಬಾರ್; ರತ್ನಖಚಿತ ಸಿಂಹಾಸನ ಏರಿದ ಯದುವೀರ್

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ಇಂದು ಖಾಸಗಿ ದರ್ಬಾರ್ ಅದ್ಧೂರಿಯಾಗಿ ನೆರವೇರಿತು.

ಬೆಳಿಗ್ಗೆ 6 ಗಂಟೆಗೆ ರತ್ನಖಚಿತ ಸಿಂಹಾಸನಕ್ಕೆ ಸಿಂಹ ಮುಖ ಜೋಡಣೆಯೊಂದಿಗೆ ಖಾಸಗಿ ದರ್ಬಾರ್ ಗೆ ಚಾಲನೆ ಸಿಕ್ಕಿತು. ಬೆಳಿಗ್ಗೆ 8.35 ರಿಂದ 9.05 ರ ನಡುವೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿತು.

ಬಳಿಕ 11.45 ರ ಶುಭ ಲಗ್ನದಲ್ಲಿ ಯದುವೀರ್ ಒಡೆಯರ್ ಅವರು ರತ್ನಖಚಿತ ಸಿಂಹಾಸನಾರೋಹಣ ಮಾಡಿದರು. ನಂತರ ಎಲ್ಲಾ ದೇವಾಲಯಗಳಿಂದ ಬಂದ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಮಧ್ಯಾಹ್ನ 1.40 ರಿಂದ 2.05 ರವರೆಗೆ ಚಾಮುಂಡಿ ತಾಯಿಯನ್ನು ಚಾಮುಂಡೇಶ್ವರಿ ತೊಟ್ಟಿಯಿಂದ ಕನಕ ತೊಟ್ಟಿಗೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಮುಂದಿನ 10 ದಿನಗಳ ಕಾಲ ಪ್ರತಿನಿತ್ಯ ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆಗಳಿಗೆ ಕೋಡಿ ಸೋಮೇಶ್ವರ ದೇವಾಲಯದಿಂದ ಕರೆ ತಂದು ಕಲ್ಯಾಣ ತೊಟ್ಟಿಯಲ್ಲಿ ಪೂಜೆ ಸಲ್ಲಿಸಲಾಗುವುದು. ಜೊತೆಗೆ ಪ್ರತಿದಿನ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಹಾಗೂ ಖಾಸಗಿ ದರ್ಬಾರ್ ನಡೆಯಲಿದೆ.