ಕಂಕಣಧಾರಣೆಗೂ ಮುನ್ನ ಯದುವೀರ್ ಮಾತು

ಮೈಸೂರು: ಖಾಸಗಿ ದರ್ಬಾರ್ ಗೂ ಮುನ್ನ ಕಂಕಣಧಾರಣೆ ಮಾಡಿಕೊಂಡ ಬಳಿಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಧ್ಯಮಗಳಿಗೆ ಸಂದರ್ಶನ ನೀಡಿದರು.

ಕಂಕಣಧಾರಣೆಯ ಉದ್ದೇಶ ಏನು?
ಕಂಕಣಧಾರಣೆಯ ಬಗ್ಗೆ ಮಾತನಾಡಿದ ಅವರು, ರಕ್ಷಣೆಯ ದೃಷ್ಟಿಯಿಂದ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಕಂಕಣಧಾರಣೆ ಮಾಡಲಾಗುತ್ತದೆ. ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ಸಾಗಬೇಕು, ಯಾವುದೇ ತೊಡಕು, ಕೆಡುಕು ಆಗಬಾರದು ಎಂಬ ಕಾರಣಕ್ಕೆ ಕಂಕಣ ಕಟ್ಟುತ್ತಾರೆ ಎಂದು ವಿವರಣೆ ನೀಡಿದರು.

ಈ ಬಾರಿ ದಸರಾ 10 ದಿನ ಬಂದಿದೆ. ಇದು ಸಂಪೂರ್ಣ ತಿಥಿ ಮೇಲೆ ಅವಲಂಬಿತವಾಗಿದೆ. ಪ್ರತಿವರ್ಷ ನವರಾತ್ರಿ 9 ದಿನ ಇರುತ್ತದೆ, ಈ ಬಾರಿ ತಿಥಿ ಕಾರಣ 10 ದಿನ ಬಂದಿದೆ. ಸೂರ್ಯೋದಯ, ಸೂರ್ಯಾಸ್ತದಿಂದ ತಿಥಿ ಬದಲಾಗುತ್ತದೆ ಎಂದು ಹೇಳಿದರು.

ರಾಜವಂಶದ ಬಗ್ಗೆ: ಇದುವರೆಗಿನ 26 ರಾಜರ ಪೈಕಿ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಜಯಚಾಮರಾಜ ಒಡೆಯರ್ ಅವರು ತಮಗೆ ಸ್ಪೂರ್ತಿ ಎಂದು ಹೇಳಿದರು.

2015 ರಿಂದ ಈವರೆಗಿನ ದಸರಾದಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಆರಂಭದಲ್ಲಿ ಹೆಚ್ಚು ಕಲಿಯಬೇಕಿತ್ತು, ಈಗ ಎಲ್ಲವೂ ಕರಗತವಾಗಿದೆ, ರೂಢಿಯಾಗಿದೆ ಎಂದು ತಿಳಿಸಿದರು.

ಧಾರ್ಮಿಕ ಆಚರಣೆ ವೇಳೆ ತಪ್ಪಾದರೆ ಅಮ್ಮ (ಪ್ರಮೋದಾದೇವಿ ಒಡೆಯರ್) ತಿದ್ದುತ್ತಾರೆ. ಅವರು ಇರುವುದೇ ತಪ್ಪುಗಳನ್ನು ತಿದ್ದುವುದಕ್ಕೆ. ಆದರೆ ನಾನು ಈವರೆಗೆ ಯಾವುದೇ ತಪ್ಪು ಎಸಗಿಲ್ಲ. ಆರಂಭದಲ್ಲಿ ಆತಂಕವಿತ್ತು, ಈಗ ಆತಂಕ ದೂರವಾಗಿದೆ ಎಂದು ಹೇಳಿದರು.

ಉಪವಾಸ, ಆಯುಧ ಪೂಜೆ: ದಸರಾ ವೇಳೆ ನಾವು ಉಪವಾಸ ಇರುವುದಿಲ್ಲ. ಪೂಜೆ ಬಳಿಕ ಉಪಹಾರ, ಸಸ್ಯಹಾರ ಸೇವನೆ ಮಾಡುತ್ತೇವೆ. 10 ದಿನಗಳ ಕಾಲ ಹೊರಗಡೆ ಊಟ ನಿಷಿದ್ಧ. ಆಯುಧ ಪೂಜೆ ದಿನ ಎಲ್ಲಾ ವಾಹನಗಳಿಗೂ ಪೂಜೆ ಸಲ್ಲಿಸುತ್ತೇವೆ. ನನಗೆ ಇಂತಹದ್ದೇ ವಾಹನ ಫೇವರಿಟ್ ಅಂತಿಲ್ಲ ಎಂದು ಹೇಳಿದರು.

ನವರಾತ್ರಿ ದಿನವೇ ಕಂಕಣ ವಿಸರ್ಜನೆ ಆಗುತ್ತದೆ. ವಿಜಯದಶಮಿ ದಿನ ಹಲವು ಕಾರ್ಯಕ್ರಮಗಳಿರುತ್ತವೆ. ಅರಮನೆಯಲ್ಲಿ ಚಾಮುಂಡಿ ಪುನಃ ಕನ್ನಡಿ ತೊಟ್ಟಿಗೆ ತೆರಳುವುದನ್ನು ನೋಡುವುದೇ ಮೊದಲ ಕಾರ್ಯ ಎಂದು ತಿಳಿಸಿದರು.

ರಾಜಪೋಷಾಕನ್ನು ಮೊದಲ ವರ್ಷ ಸಿದ್ಧಪಡಿಸಿದ್ದಾರೆ, ಅಂದಿನಿಂದ ಅದನ್ನೇ ಬಳಸುತ್ತಿದ್ದೇವೆ. ಅದೇ ಅಂಗಾರಕವನ್ನು ಇಂದಿಗೂ ಬಳಸುತ್ತಿದ್ದೇವೆ. ನಮಗೆ ಅಂಬಾರಿ, ಸಿಂಹಾಸನ ಎರಡೂ ಮುಖ್ಯ. ಪಾರಂಪರಿಕತೆ, ನಂಬಿಕೆ ಉಳಿಸಿಕೊಂಡು ಹೋಗುತ್ತಿದ್ದೇವೆ. ಅದರ ಶಕ್ತಿ, ಇತಿಹಾಸ ಎಲ್ಲವೂ ಕನ್ನಡಿಗರ ಪಾರಂಪರಿಕ ಸಂಕೇತ ಎಂದು ಹೇಳಿದರು.

ಜೆನ್-ಜಿ ಮತ್ತು ಫ್ಲೆಕ್ಸ್ ವಿಚಾರ: ಇತ್ತೀಚಿನ ಜೆನ್-ಜಿ ಮನಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಹೇಳುವುದಕ್ಕಿಂತ ಮಾಡಿ ತೋರಿಸಬೇಕು. ಮನೆಯಲ್ಲಿ ಹಿರಿಯರು ಕಿರಿಯರಿಗೆ ತಿಳಿಸಬೇಕು. ನಾನು ಮನೆ ಬಿಟ್ಟು ಬೇರೆಯವರಿಗೆ ಏನೂ ಹೇಳಲ್ಲ. ನನಗೂ ಇಬ್ಬರು ಮಕ್ಕಳಿದ್ದಾರೆ, ಅವರಿಗೆ ನಾವು ಏನು, ಏನು ಆಚರಿಸಬೇಕು ಎಂದು ತಿಳಿಸಬೇಕು. ಜೆನ್-ಜಿ ಗಳಿಗೆ ಹೇಳುವ ಬದಲು ನಾವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ನಾವು ತಿದ್ದಿಕೊಂಡರೆ ಅವರೂ ನಮ್ಮನ್ನು ಹಿಂಬಾಲಿಸುತ್ತಾರೆ ಎಂದರು.

ರಾತ್ರಿ ವೇಳೆ ಅರಮನೆ ಸುತ್ತ ಮದ್ಯ ಸೇವನೆ, ಕೇಕ್ ಕಟ್ ಮಾಡುವುದು, ಆನೆಗಳ ತಾಲೀಮು ವೇಳೆ ಕೀಟಲೆ ಮಾಡುವ ವಿಚಾರದಲ್ಲಿ ಶಿಸ್ತು ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆಡಳಿತ ನಡೆಸುವವರು ದಿಟ್ಟ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ, ಎಂಸಿಸಿ ಕಠಿಣ ಕ್ರಮ ಜರುಗಿಸಬೇಕು. ಸಮಾಜಕ್ಕೆ ಭಯವಿರಬೇಕು, ತಪ್ಪು ಮಾಡಿದರೆ ಶಿಕ್ಷೆ ಆಗುತ್ತೆ ಅನ್ನೋದು ಬರಬೇಕು ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಫ್ಲೆಕ್ಸ್ ಹಾವಳಿ ಬಗ್ಗೆ ಮಾತನಾಡಿ, ಫ್ಲೆಕ್ಸ್ ಯಾರೇ ಹಾಕಿದರೂ ದಂಡ ವಿಧಿಸಿ. ನನ್ನ ಫೋಟೋ ಇದ್ದರೂ ನನಗೂ ದಂಡ ವಿಧಿಸಿ. ಆ ರೀತಿ ದಂಡ ವಿಧಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.