ಸಿಎಂರಿಂದ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ

ಮೈಸೂರು: ಕೊರೊನಾದಿಂದ ಮೈಸೂರು ಅರಮನೆ ಆವರಣಕ್ಕೆ ಸೀಮಿತವಾದ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಮಧ್ಯಾಹ್ನ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2.59ರಿಂದ 3.20ವರೆಗೆ ಸಲ್ಲುವ ಶುಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು.
ನಂತರ 3.40ರಿಂದ 4.15ವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಮುಖ್ಯಮಂತ್ರಿಗಳು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ 21 ಸುತ್ತಿನ ಕುಶಾಲತೋಪು ಸಿಡಿಸಲಾಯಿತು.
ಮುಖ್ಯಮಂತ್ರಿಗಳೊಂದಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರ್ ತಸ್ಲೀಂ, ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ ಇದ್ದರು.
ಈ ಬಾರಿಯ ಸರಳ ಹಾಗೂ ಸಾಂಪ್ರದಾಯಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ ಎರಡು ಸ್ತಬ್ಧಚಿತ್ರಗಳು, ಐದು ಕಲಾ ತಂಡಗಳು ಮಾತ್ರ ಭಾಗಿಯಾಗಿದ್ದವು.
ಪ್ರತಿ ವರ್ಷ ಜಂಬೂಸವಾರಿ ವೀಕ್ಷಣೆಗೆ ಸಾವಿರಾರು ಮಂದಿ ಸೇರುತ್ತಿದ್ದ ಅರಮನೆಯಲ್ಲಿ ಈ ಬಾರಿ 300 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
ಅರಮನೆ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿತ್ತ್ತು.