ಮೈಸೂರು: ಈ ಬಾರಿಯ ದಸರಾ ಲೆಕ್ಕವನ್ನು ನ. 1ರಂದು ಬಿಡುಗಡೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನಗರದಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ದಸರಾ ಆಯೋಜಿಸಲು ಸರ್ಕಾರದಿಂದ 10 ಕೋಟಿ ರೂ. ಮತ್ತು ಮುಡಾದಿಂದ 5 ಕೋಟಿ ರೂ. ಅನುದಾನ ಒದಗಿಸುವುದು ಎಂದು ನಿರ್ಧಾರವಾಗಿತ್ತು. ಆದರೆ ದಸರಾವನ್ನು ಸರ್ಕಾರ ನೀಡಿದ 10 ಕೋಟಿ ರೂ. ಅನುದಾನದಲ್ಲೇ ಪೂರ್ಣಗೊಳಿಸಲಾಗಿದ್ದು, ಮುಡಾ ಘೋಷಿಸಿದ್ದ 5 ಕೋಟಿ ರೂ. ಅನುದಾನವನ್ನು ಪಡೆದಿರುವುದಿಲ್ಲ ಎಂದವರು ತಿಳಿಸಿದರು.
ಸರಳ ದಸರಕ್ಕಾಗಿ ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ನ. 1ರಂದು ತಿಳಿಸಲಾಗುವುದು ಎಂದವರು ಹೇಳಿದರು.
ದಸರಾ ಯಶಸ್ಸಿಗೆ ಸಹಕರಿಸಿದ ಸಿಎಂ, ಜನಪ್ರತಿನಿಧಿಗಳು ಮತ್ತು ಮೈಸೂರಿನ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ ತಿಳಿಸಿದರು.
ಸರಳ ಸಾಂಪ್ರದಾಯಿಕ 9 ದಿನದ ದಸರಾ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಸೂಚನೆಯಂತ ದಸರಾ ಆಚರಿಸಿದ್ದೇವೆ ಎಂದರು.
7 ಲಕ್ಷಕ್ಕೂ ಅಧಿಕ ಜನ ದಸರಾ ವೀಕ್ಷಿಸಿ ಯಶಸ್ಸಿಗೆ ಕಾರಣರಾಗಿದ್ದಾರೆಂದು ಅವರು ಹೇಳಿದರು.
ನಗರದಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಬುಧವಾರದಿಂದ ತೆರವುಗೊಳಿಸಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ಮಾತ್ರ ಕನ್ನಡ ರಾಜೋತ್ಸವದ ವರೆಗೂ ದೀಪಾಲಂಕಾರ ಮುಂದುವರೆಯಲಿದೆ ಎಂದವರು ತಿಳಿಸಿದರು.
ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದ್ದು, ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ ಆಗಿತ್ತು ಎಂದರು.
ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಗಾಯಕ, ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿನಲ್ಲಿ ಒಂದು ದಿನ ಕಾರ್ಯಕ್ರಮ ನಡೆಯಿತು. ಇದು ಸಹ ದಸರಾ ಮಹೋತ್ಸವದಲ್ಲಿ ಅಗಲಿದ ಗಣ್ಯರೊಬ್ಬರ ಹೆಸರಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿರುವುದು ಇದೇ ಮೊದಲು ಎಂದು ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದರು.
ದಸರಾ ಸಂದರ್ಭದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಯಿತು. ಪರೀಕ್ಷೆ ಪ್ರಮಾಣ ಹೆಚ್ಚಾದರೂ ಸೋಂಕಿತರ ಸಂಖ್ಯೆಗೆ ಸೆಪ್ಟೆಂಬರ್‍ಗೆ ಹೋಲಿಸಿದರೆ ಕಡಿಮೆ ಬರುತ್ತಿರುವುದು ಸಮಾಧಾನಕರ ಸಂಗತಿ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಲ್ ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಉಪಸ್ಥಿತರಿದ್ದರು.

