ನಾವೆಲ್ಲರೂ ನವೆಂಬರ್ ಕನ್ನಡಿಗರಾಗೋದು ಬೇಡ -ಸಿಎಂ ಬಿಎಸ್.ವೈ

ಬೆಂಗಳೂರು: ನಾವೆಲ್ಲರೂ ನವೆಂಬರ್ ಕನ್ನಡಿಗರಾಗೋದು ಬೇಡ. ವರ್ಷವಿಡೀ ಕನ್ನಡವನ್ನು ಪೂಜಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 65ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಸರಳ ಸಮಾರಂಭದಲ್ಲಿ ಸಿಎಂ ಮಾತನಾಡದರು.
ವರ್ಷಪೂರ್ತಿ ಕನ್ನಡತನವನ್ನೇ ಹೊಂದಿರಬೇಕು ಎಂದು ರಾಜ್ಯದ ನಾಡಿನ ಜನತೆಗೆ ಮುಖ್ಯಮಂತ್ರಿಗಳು ಕರೆಯಿತ್ತರು.
ವಿಶ್ವಮಟ್ಟದಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಹೆಸರಾಗಿದೆ. ಹೀಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡೇ ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ಯೋಣ ಎಂದರು.
ಮುಂದಿನ ವರ್ಷವನ್ನು ಕನ್ನಡ ಕಾಯಕ ವರ್ಷವನ್ನಾಗಿ ಪರಿಗಣಿಸಿ, ಕನ್ನಡಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಒಂದು ಕಡೆ ಕೋವಿಡ್, ಇನ್ನೊಂದು ಕಡೆ ಪ್ರವಾಹ. ಇವೆರಡೂ ಕಷ್ಟದ ಪರಿಸ್ಥಿತಿಗಳನ್ನು ನಮ್ಮ ಸರಕಾರ ದಿಟ್ಟತನದಿಂದ ನಿರ್ವಹಿಸಿದೆ ಎಂದು ಮಖ್ಯಮಂತ್ರಿಗಳು ತಿಳಿಸಿದರು.
ಕನ್ನಡ ಉಳಿವಿಗಾಗಿ ನಾವೆಲ್ಲರೂ ಹೆಚ್ಚುಹೆಚ್ಚಾಗಿ ಕನ್ನಡವನ್ನೇ ಬಳಸಬೇಕು. ನಿತ್ಯದ ಚಟುವಟಿಕೆಗಳಲ್ಲಿ ಕನ್ನಡವನ್ನೇ ಮಾತನಾಡಬೇಕು, ತಮ್ಮ-ತಮ್ಮ ಮನೆಗಳಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಮಕ್ಕಳು ಕನ್ನಡವನ್ನು ಕಲಿತುಕೊಳ್ಳುವುದರಿಂದ ಭಾಷೆ ಬೆಳೆಯುತ್ತದೆ ಎಂದರು.
ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್, ಪೆÇೀಷಕರು ತಮ್ಮ ಮಕ್ಕಳನ್ನು ಮತ್ತೆ ಸರಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆಂದರು.
ಕೋವಿಡ್ ಕಾಲದಲ್ಲಿ 90 ಸಾವಿರಕ್ಕೂ ಹೆಚ್ಚು ಮಕ್ಕಳು ಸರಕಾರಿ ಶಾಲೆಗಳಿಗೆ ಸೇರ್ಪಡೆ ಆಗಿದ್ದಾರೆ. ಕಳೆದ 14 ವರ್ಷಗಳಲ್ಲೇ ಅತಿಹೆಚ್ಚು ಮಕ್ಕಳು ದಾಖಲಾದ ಕಾಲವಿದು. ಇಂಥ ಮಕ್ಕಳ ನಿರೀಕ್ಷೆಗೆ ತಕ್ಕಂತೆ ಉತ್ತಮ ಕಲಿಕೆ ಮತ್ತು ಬೋಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.