ಕುವೆಂಪು ಸಮಗ್ರ ಸಾಹಿತ್ಯದ 8 ಸಂಪುಟಗಳ ಮುದ್ರಣ-ಡಿಜಿಟಲ್ ಆವೃತ್ತಿ ಡಿಸಿಎಂರಿಂದ ಲೋಕಾರ್ಪಣೆ

ಬೆಂಗಳೂರು: ಕನ್ನಡ ರಾಜ್ಯೋತ್ಸವ ನಿಮಿತ್ತ ಸಮಸ್ತ ಕನ್ನಡಿಗರಿಗೆ ಅಪರೂಪದ ಕಾಣಿಕೆಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಂಪಾದಿಸಿ ಹೊರತಂದಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ ಮೊದಲ 8 ಸಂಪುಟಗಳ ಮುದ್ರಣ ಮತ್ತು ಡಿಜಿಟಲ್ ಆವೃತ್ತಿಗಳನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನಗರದಲ್ಲಿ ಭಾನುವಾರ ಲೋಕಾರ್ಪಣೆ ಮಾಡಿದರು.
ನಾಲ್ವರು ಕುಲಪತಿಗಳ ಅಧಿಕಾರ ಅವಧಿಯಲ್ಲಿ ಸಾಗಿದ ಈ ಯೋಜನೆಗೆ ಉಪ ಮುಖ್ಯಮಂತ್ರಿ ವೇಗ ನೀಡಿದ್ದರಲ್ಲದೆ, ಸ್ವತಃ ಕಾಳಜಿ ವಹಿಸಿ ಮೊದಲ ಎಂಟು ಸಂಪುಟಗಳು ಹೊರಬರುವಂತೆ ಮಾಡಿದ್ದಾರೆ.
ಉಳಿದ ಹತ್ತು ಸಂಪುಟಗಳನ್ನು ಆದಷ್ಟು ಬೇಗ ಹೊರತರುವುದಾಗಿ ಅವರು ಹೇಳಿ, ಈ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ನೀಡುತ್ತಿರುವ ಅತ್ಯುತ್ತಮ ಕೊಡುಗೆ ಇದಾಗಿದೆ ಎಂದರು.
ಕನ್ನಡಕ್ಕೆ ಸದೃಢವಾದ ನೆಲೆ ಇದೆ. ನಮ್ಮ ಭಾಷೆಯನ್ನು ಮಾತನಾಡುವ ಅಗಾಧ ಜನಸಮೂಹವಿದೆ. ದೊಡ್ಡ ಪ್ರಮಾಣದ ಶ್ರೇಷ್ಟ ಸಾಹಿತ್ಯವಿದೆ. ಇಂಥ ಭಾಷೆಗೆ ತಂತ್ರಜ್ಞಾನವೂ ಜತೆಯಾದರೆ, ಕನ್ನಡಕ್ಕಾಗಿ ಇನ್ನೂ ಅನೇಕ ಅದ್ಭುತ ಕೆಲಸಗಳು ಆಗಲಿವೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡಲು ಸರಕಾರ ಸದಾ ಸಿದ್ಧವಿದೆ ಎಂದರು ಡಿಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ರಾಂತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಮಾತನಾಡಿ, ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಕನ್ನಡವನ್ನು ಕಡಾಯವಾಗಿ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಲಹೆಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಸಿಯಿಸಿದ ಡಾ. ಅಶ್ವತ್ಥನಾರಾಯಣ ಅವರು ಪ್ರಾಥಮಿಕ ಶಿಕ್ಷಣ ಹಂತದಿಂದ ಅಲ್ಲ, ಶಿಶು ವಿಹಾರದ ಹಂತದಿಂದಲೇ ಕನ್ನಡ ಕಲಿಸುವ ಪ್ರಯತ್ನ ಆರಂಭವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ಸಮಗ್ರ ಸಂಪುಟಗಳ ಸಂಪಾದಕ ಡಾ.ಕೆ.ಸಿ.ಶಿವಾರೆಡ್ಡಿ, ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪೆÇ್ರ. ಮಲ್ಲೇಪುರಂ ವೆಂಕಟೇಶ್, ಹಂಪಿ ವಿವಿ ಕುಲಪತಿ ಪೆÇ್ರ. ಎಸ್. ರಮೇಶ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪೆÇ್ರ. ಕರಿಸಿದ್ದಪ್ಪ ಮಾತನಾಡಿದರು.
ಆನ್‍ಲೈನ್ ಮೂಲಕ ಮೈಸೂರಿನ ಉದಯರವಿಯಿಂದಲೇ ಸಭೆಯಲ್ಲಿ ಭಾಗಿಯಾಗಿದ್ದ ವಿಶ್ರಾಂತ ಕುಲಪತಿ ಹಾಗೂ ಕುವೆಂಪು ಅವರ ಅಳಿಯ ಡಾ. ಚಿದಾನಂದ ಗೌಡ, ಅವರ ಪತ್ನಿ ಹಾಗೂ ಕುವೆಂಪು ಅವರ ಪುತ್ರಿ ತಾರಿಣಿ ಇಬ್ಬರೂ ಮಾತನಾಡಿದರು. ಹಾಗೆಯೇ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಹಾಗೂ ಡಿಜಿಟಲ್ ಕನ್ನಡಕ್ಕಾಗಿ ಅನೇಕ ಆವಿಷ್ಕಾರಗಳನ್ನು ಮಾಡುತ್ತಿರುವ ಡಾ.ಎ.ಜಿ .ರಾಮಕೃಷ್ಣನ್ ತಂತ್ರಜ್ಞಾನದಲ್ಲಿ ಕನ್ನಡಕ್ಕಾಗಿ ಐಐಎಸ್‍ಸ್ಸಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು.
ಕನ್ನಡ ತಾಂತ್ರಿಕ ಅಭಿವೃದ್ಧಿ ಮಂಡಳಿ ವಿಷನ್ ಗ್ರೂಪ್ ಅಧ್ಯಕ್ಷ ಡಾ.ಸಮೀರ್ ಕಾಗಲ್ಕರ್, ಜಗತ್ತಿನ ಇತರೆ ಭಾಷೆಗಳ ಜನರಿಗೂ ಕನ್ನಡ ಸಾಹಿತ್ಯವನ್ನು ಮುಟ್ಟಿಸುವುದ್ಹೇಗೆ ಎಂಬ ಬಗ್ಗೆ ಮಾತನಾಡಿದರು.
ಭಾಷಿಣಿ ಡಿಜಿಟಲ್ ಸಂಸ್ಥೆಯ ಡಾ.ಶಿವಕುಮಾರ್ ಮತ್ತು ಭಾರ್ಗವಿ ಅವರ ಶ್ರಮದಿಂದ ಕೇವಲ ಒಂದೇ ವಾರದಲ್ಲಿ 12 ಸಂಪುಟಗಳ 12,000 ಪುಟಗಳ ಕುವೆಂಪು ಸಾಹಿತ್ಯದ ಡಿಜಿಟಲ್ ಆವೃತ್ತಿ ಸಿದ್ಧವಾಗಿದೆ. ಅದರ ಬಳಕೆ, ಓದು ಅತ್ಯಂತ ಸರಳವಾಗಿದೆ.
ರಾಜ್ಯೋತ್ಸವದ ನಿಮಿತ್ತ ಹಂಪಿ ವಿವಿ ತನ್ನೆಲ್ಲ ಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಈಗ ಬಿಡುಗಡೆ ಆಗಿರುವ ಕುವೆಂಪು ಸಮಗ್ರ ಸಾಹಿತ್ಯ ಸಂಪುಟವು 5 ಸಾವಿರ ರೂ.ಗಳಿಗೆ ಲಭ್ಯವಿದೆ ಎಂದು ಇದೇ ವೇಳೆ ಕುಲಪತಿ ಪೆÇ್ರ. ರಮೇಶ್ ಪ್ರಕಟಿಸಿದರು.