ಶಬರಿಮಲೈ: ಭಕ್ತರಿಗೆ ವರ್ಚುವಲ್ ಕ್ಯೂ ವ್ಯವಸ್ಥೆ

ತಿರುವನಂತಪುರಂ: ಶಬರಿ ಮಲೈಗೆ ತೆರಳುವ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ಈ ಬಾರಿ ನಿಯಂತ್ರಿಸಲಾಗುತ್ತದೆ.
ಇದೇ ಮೊದಲ ಬಾರಿಗೆ ಅಯ್ಯಪ್ಪ ದರುಶನಕ್ಕೆ ಬರುವ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆ ಮೂಲಕ ನಿಯಂತ್ರಿಸಲು ದೇವಸ್ವಂ ಮಂಡಳಿ ಕ್ರಮ ಕೈಗೊಂಡಿದೆ.
ಇದೇ ನ. 16ರಿಂದ ಆರಂಭವಾಗುವ ಹಬ್ಬದ ದಿನಗಳಲ್ಲಿ ಎಲ್ಲಾ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ.
ವರ್ಚುವಲ್ ಕ್ಯೂನಲ್ಲಿ ನೋಂದಾಯಿಸದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ವಾರದ ದಿನಗಳಲ್ಲಿ ದಿನಕ್ಕೆ 1 ಸಾವಿರ ಭಕ್ತರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದ್ದು, ಶನಿವಾರ ಮತ್ತು ಭಾನುವಾರದಂದು 2 ಸಾವಿರ ಭಕ್ತರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಮಂಡಲ-ಮಕರ, ವಿಲಕ್ಕು ಪೂಜ ದಿನಗಳಲ್ಲಿ 5 ಸಾವಿರ ಮಂದಿ ಭಕ್ತರಿಗೆ ದೇವರ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ.
ಕೋವಿಡ್-19 ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಪಂಬಾ ನದಿಯಲ್ಲಿ ಸಾಂಪ್ರದಾಯಿಕ ಪವಿತ್ರ ಸ್ನಾನ ಮಾಡಲು ಅಥವಾ ಪಂಬಾದಲ್ಲಿ ಉಳಿಯಲು ಭಕ್ತರಿಗೆ ಅವಕಾಶ ಇರುವುದಿಲ್ಲ.
ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕಳೆದ 24 ಗಂಟೆಗಳಲ್ಲಿ ಕೋವಿಡ್-19 ನಕಾರಾತ್ಮಕ ಪ್ರಮಾಣ ಪತ್ರ ಮತ್ತು ವೈದ್ಯಕೀಯ ವಿಮಾ ಕಾರ್ಡ್ ಹೊಂದಿರಬೇಕು.