ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ? -ಡಿ.ಕೆ.ಶಿ. ಪ್ರಶ್ನೆ

ಬೆಂಗಳೂರು: ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಡಿಕೆಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ? ಎಂದು ಡಿ.ಕೆ.ಶಿ. ಅವರು ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇವರು ಪ್ರಚಾರಕ್ಕೋಸ್ಕರ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಇವರಿಗೆ ಹೇಳೋರು, ಕೇಳೋರು ಯಾರೂ ಇಲ್ಲ ಎಂದರು.
ಹಗಲು ವೇಳೆ ಓಡಾಟ ಮಾಡಬಹುದು, ರಾತ್ರಿ ಹೊತ್ತು ಕರ್ಫ್ಯು ಮಾಡುವುದೇಕೆ? ಇದರಿಂದ ಸೋಂಕು ನಿಯಂತ್ರಣ ಸಾಧ್ಯವಾ? ಈ ಬಗ್ಗೆ ಯಾರ ಬಳಿ ಚರ್ಚೆ ಮಾಡಿದ್ದಾರೆ? ರಾತ್ರಿ ವೇಳೆ ಸೋಂಕು ಹರಡುತ್ತದೆ ಎನ್ನುವುದಕ್ಕೆ ಪುರಾವೆಗಳಿವೆಯೇ? ಹಗಲು ವೇಳೆ ಹರಡುವುದಿಲ್ಲವೇ? ಎಂದರು.
ಯಾವುದೋ ಕೆಲವು ವರ್ಗಗಳಿಗೆ ತೊಂದರೆ ಕೊಡಲು ತೀರ್ಮಾನ ಕೈಗೊಳ್ಳಬಾರದು ಎಂದು ಡಿಕೆಶಿ ಹೇಳಿದರು.
ನೀವು ಕೊರೊನಾ ನಿಯಂತ್ರಣ ಎಲ್ಲಿ ಮಾಡಿದ್ದೀರಿ? ಸುಮ್ಮನೆ ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದಲ್ಲ. ಅಧಿವೇಶನ ಕರೆಯಿರಿ. ಎಲ್ಲರೂ ಚರ್ಚೆ ಮಾಡೋಣ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.