ಬೆಂಗಳೂರು: ರಾತ್ರಿ ಕರ್ಫ್ಯೂವನ್ನು ರಾಜ್ಯ ಸರಕಾರ ಹಿಂಪಡೆದಿದೆ.
ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಬ್ರಿಟನ್ ನಲ್ಲಿ ರೂಪಾಂತರ ಹೊಂದಿದ ಕೋವಿಡ್ ವೈರಾಣು ಪತ್ತೆ ಆದ ಹಿನ್ನೆಲೆಯಲ್ಲಿ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಜ್ಞರ ಸಲಹೆ ಮೇರೆ ರಾತ್ರಿ ಕರ್ಫ್ಯೂ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿತ್ತು.
ರಾತ್ರಿ ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈ ವೈರಾಣು ಹರಡುವಿಕೆ ತಡೆಯಲು ಸಿಎಂ ಮನವಿ ಮಾಡಿದ್ದಾರೆ.
ರೂಪಾಂತರ ಹೊಂದಿದ ವೈರಸ್ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಎರಡು ದಿನಗಳ ಹಿಂದೆ ಇದೇ ಡಿಸೆಂಬರ್ 24ರಿಂದ ಜನವರಿ 1ರವರೆಗೆ ರಾತ್ರಿ 10ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿತ್ತು.
ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

