ರಾಜಕೀಯಕ್ಕಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಕೂಗು -ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಫೆ. 11- ರಾಜಕೀಯಕ್ಕಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಕೂಗು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲಾ ಪ್ರತಕರ್ತರಭವನದಲ್ಲಿ ಶನಿವಾರ ಸುದ್ದಿಗೊಷ್ಠಿ ನಡೆಸಿ ಅವರು ಮಾತನಾಡಿದರು.
ಅಹಿಂದ ಕೂಗು ಎತ್ತುತ್ತಿರುವವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ. ರಾಜಕೀಯಕ್ಕಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಕೂಗು ಎತ್ತಿದ್ದಾರೆಂದರು.
ಆ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಸಚಿವ ಸೋಮಶೇಖರ್ ಹೇಳಿದರು.
ರಾಜ್ಯದಲ್ಲಿ ಅಹಿಂದ ಹೋರಾಟ ಸದ್ಯಕ್ಕೆ ಇದು ಅಪ್ರಸ್ತುತ, ಚುನಾವಣೆ ಕೂಡಾ ಇನ್ನೂ ತುಂಬಾ ದೂರ ಇದೆ ಎಂದರು ಎಸ್ ಟಿ ಎಸ್.
ಸಿದ್ದರಾಮಯ್ಯ ಜೊತೆಗೆ ನನ್ನ ವಿಶ್ವಾಸ ಈಗಲೂ ಹಾಗೆ ಉಳಿದುಕೊಂಡಿದೆ. ಪರಸ್ಪರ ವೈಯುಕ್ತಿಕವಾಗಿ ವಿಶ್ವಾಸದಿಂದಿದ್ದೇವೆಯೇ ಹೊರತು ರಾಜಕೀಯವಾಗಲ್ಲ. ನಾನು 5 ವರ್ಷ ಅವರ ಜೊತೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿಯಲ್ಲಿ ಇದ್ದೇನೆ ಇಲ್ಲೂ ವಿಶ್ವಾಸದಿಂದ ಕೆಲಸಮಾಡುತ್ತೇನೆ ಎಂದರು.
ಪೆಟ್ರೋಲ್ ಡೀಸೆಲ್ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ವರಮಾನ ಕಮ್ಮಿಯಾಗಿದೆ. ಹಾಗಾಗಿ ಪೆಟ್ರೋಲ್ ಮೇಲಿನ ಸೆಸ್ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಮೇಯರ್ ಚುನಾವಣೆಯಲ್ಲಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಈಗಾಗಲೇ ರಾಜ್ಯಮಟ್ಟದ ನಾಯಕರ ಜೊತೆ ಮಾತುಕತೆ ಆಗಿದೆ. ಆದರೆ ಸ್ಥಳೀಯ ಮಟ್ಟದ ನಾಯಕರ ಜೊತೆ ಇನ್ನೂ ಚರ್ಚೆ ಮಾಡಿಲ್ಲ. ಸ್ಥಳೀಯ ನಾಯಕರ ಅಭಿಪ್ರಾಯವನ್ನೂ ಕೂಡ ಪಡೆದುಕೊಳ್ಳಬೇಕು. ಜೊತೆಗೆ ಬಿಜೆಪಿಯವರೇ ಮೇಯರ್ ಆಗಬೇಕೆಂಬ ವಿಚಾರ ಮುಂಚೂಣಿಯಲ್ಲಿದೆ. ಈ ಬಗ್ಗೆ ಕೂಡಾ ಚರ್ಚೆ ಆಗುತ್ತಿದೆ ಎಂದು ಸೋಮಶೇಖರ್ ತಿಳಿಸಿದರು.
ಕೇಂದ್ರ ಮಂಡಿಸಿದ ಬಜೆಟ್ ಭಾರತವನ್ನು 2025ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ಒಯ್ಯಲಿದೆ ಎಂದವರು ತಿಳಿಸಿದರು.
ಬಜೆಟ್ ಮಂಡನೆ ವೇಳೆ ಕೇಂದ್ರ ಸರಕಾರದ ಮುಂದೆ ಇನ್ನಷ್ಟು ತೆರಿಗೆ ವಿಧಿಸಿ ಹಣ ಸಂಗ್ರಹಿಸುವುದು ಅಥವಾ ಸಾಲ ಮಾಡಿಯಾದರೂ ಹೆಚ್ಚು ಮೂಲಸೌಕರ್ಯ ಒದಗಿಸುವುದು, ಹಣಕಾಸು ಚಟುವಟಿಕೆ ಹೆಚ್ಚಳ ಹಾಗೂ ಉತ್ಪಾದನೆ ಹೆಚ್ಚಳದ ಎರಡು ಆಯ್ಕೆಗಳಿದ್ದವು. ಇದರಲ್ಲಿ ಎರಡನೇ ಆಯ್ಕೆ ನಮ್ಮದಾಯಿತು. ಇದು ಭಾರತವನ್ನು 2025ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ವ್ಯವಸ್ಥೆಯತ್ತ ಒಯ್ಯಲಿದೆ ಎಂದರು.
ಇದೊಂದು ಐತಿಹಾಸಿಕ ಬಜೆಟ್ ಎಂದು ಬಣ್ಣಿಸಿದ ಸಚಿವ ಎಸ್.ಟಿ. ಸೋಮಶೇಖರ್, ಕೃಷಿ ಉತ್ಪಾದನೆ ಪ್ರಮಾಣ ಹೆಚ್ಚಳ, ಮೂಲಸೌಕರ್ಯ ಹೆಚ್ಚಳ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಇದು ಪೂರಕ ಎನಿಸಲಿದೆ. ಎರಡನೇ ವಿಚಾರ ಕಷ್ಟದಾಯಕವಿದ್ದರೂ ಜನರ ಹಿತದೃಷ್ಟಿಯಿಂದ ಈ ವಿಚಾರವನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು. ಅಂತರರಾಷ್ಟ್ರೀಯ ಹಣಕಾಸು ನಿಧಿಯೂ (ಐಎಂಎಫ್) ಭಾರತವು ಅತಿ ವೇಗದಿಂದ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಇದೇಕಾರಣಕ್ಕೆ ನಾವು ಮೂಲ ಸೌಕರ್ಯಕ್ಕೆ ಗರಿಷ್ಠ ಒತ್ತನ್ನು ನೀಡಲಾಗಿದೆ ಎಂದರು.
ಕೃಷಿ ಮೂಲಸೌಕರ್ಯಕ್ಕೆ 1 ಲಕ್ಷಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ವಿವಿಧ ಕ್ಷೇತ್ರಗಳ ಮೂಲಸೌಕರ್ಯ ವೃದ್ಧಿಗೆ ಒಟ್ಟಾಗಿ ಮುಂದಿನ 5 ವರ್ಷಗಳಲ್ಲಿ 100 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದರು.
ಬಿಜೆಪಿ ನಗರ ಅಧ್ಯಕ್ಷರುಗಳಾದ ಶ್ರೀವತ್ಸ, ಮಂಗಳಾ ಸೋಮಶೇಖರ್, ಶಾಸಕ ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಉಪಸ್ಥಿತರಿದ್ದರು.