ಮೈಸೂರು: ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು ಹಾಗೂ ಮೈಸೂರು ದಿ ಟೂರಿಸ್ಟ್ ಪ್ಯಾರಡೈಸ್ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಚಿವ ಸೋಮಶೇಖರ್ ಅವರು ಮಾತನಾಡಿದರು.
ಮೈಸೂರು ಸುತ್ತಮುತ್ತ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಪ್ರಸಿದ್ಧ ತಾಜ್‍ಮಹಲ್ ಜೊತೆಗೆ ಮೈಸೂರು ಅರಮನೆ ವೀಕ್ಷಿಸಲು ಹೆಚ್ಚಿನ ಪ್ರವಾಸಿಗರು ದೇಶ-ವಿದೇಶಗಳಿಂದ ಭೇಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ದಸರಾ ಆಚರಣೆ ಮೂಲಕ ಮೈಸೂರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ದಸರಾವನ್ನು ಇನ್ನೂ ಅದ್ದೂರಿಯಾಗಿ ಆಚರಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕಿದೆ. ದಸರಾ ಪ್ರಾಧಿಕಾರ ರಚನೆ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಬಗ್ಗೆಯೂ ಗಮನಹರಿಸಲಾಗುವುದು ಎಂದು ಎಸ್.ಟಿ. ಸೋಮಶೇಖರ್ ತಿಳಿಸಿದರು.
ದೇಶ ವಿದೇಶದ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡಲು ಬಹು ಮುಖ್ಯವಾಗಿ ಬೇಕಾಗಿರುವ ರಸ್ತೆ ಸಂಪರ್ಕ, ರೈಲು ಹಾಗೂ ವಿಮಾನ ಸಂಪರ್ಕವು ಸಹ ಉತ್ತಮವಾಗಿದೆ. ಉಡಾನ್ ಆದ ಮೇಲೆ ಹೆಚ್ಚು ಜನರು ವಿಮಾನ ಸೇವೆ ಬಳಸಿಕೊಳ್ಳುತ್ತಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಎಸ್ ಟಿ ಎಸ್ ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಾಗ ಮಾತ್ರ ಇಲ್ಲಿನ ಹೊಟೇಲ್‍ಗಳು ಹಾಗೂ ಇನ್ನಿತರ ವಾಣಿಜ್ಯ ವಹಿವಾಟುಗಳು ಪ್ರಗತಿ ಸಾಧಿಸಲು ಸಾಧ್ಯ. ತಾವು ಮೈಸೂರಿನ ಸಮಗ್ರ ಅಭಿವೃದ್ಧಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು.
ಐತಿಹಾಸಿಕ ಹಿನ್ನೆಲೆ ಇರುವ ಮೈಸೂರು ನಗರದ ಪ್ರವಾಸಿ ತಾಣಗಳನ್ನು ಹಿರಿಯ ಪತ್ರಕರ್ತರು ಹಾಗೂ ಕನ್ನಡಪ್ರಭ ಮೈಸೂರು ಸ್ಥಾನಿಕ ಮುಖ್ಯಸ್ಥರೂ ಆದ ಅಂಶಿ ಪ್ರಸನ್ನಕುಮಾರ್ ಅವರು ಬರೆದಿರುವ “ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು” ಕನ್ನಡ ಹಾಗೂ ಇಂಗ್ಲಿಷ್ ಅವತರಣಿಕೆಯ ಪುಸ್ತಕಗಳು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

