ಲಕ್ಷಾಂತರ ಪ್ರವಾಸಿಗರ ನೆಚ್ಚಿನ ತಾಣ ಮೈಸೂರು ಜಿಲ್ಲೆ -ಸಿಎಂ ಬಿ.ಎಸ್.ವೈ.

ಮೈಸೂರು: ಸಾಂಸ್ಕøತಿಕ ನಗರಿ ಎಂದು ಕರೆಯುವ ಮೈಸೂರು ಜಿಲ್ಲೆಯೂ ಐತಿಹಾಸಿಕ, ಪಾರಂಪರಿಕ ಹಾಗೂ ಧಾರ್ಮಿಕತೆಯ ಪ್ರಾಮುಖ್ಯತೆಯಿಂದ ಸುಂದರ ಪ್ರವಾಸಿತಾಣವಾಗಿದ್ದು, ಲಕ್ಷಾಂತರ ಜನರನ್ನು ಕೈ ಬೀಸಿ ಕರೆಯುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಚಿಂತನ ಪ್ರಕಾಶನ ಹಾಗೂ ಮುಂತಾದ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕಲಾಮಂದಿರದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ರಚಿಸಿರುವ “ಮೈಸೂರು ಸುತ್ತಮತ್ತ ನೂರೊಂದು ಪ್ರವಾಸಿ ತಾಣಗಳು” ಮತ್ತು ಆಂಗ್ಲ ಭಾಷೆಗೆ ಅನುವಾದಿಸಿರುವ “ಮೈಸೂರು – ದಿ ಟೂರಿಸ್ಟ್ ಪ್ಯಾರಡೈಸ್” ಕೃತಿಗಳ ಬಿಡುಗಡೆಗೊಳಿಸಿ ಸಿಎಂ ಅವರು ಮಾತನಾಡಿದರು.
ವಿಶ್ವವಿಖ್ಯಾತ ಮೈಸೂರು ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜ ಸಾಗರ ಜಲಾಶಯ, ಮೃಗಾಲಯ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಲಕ್ಷಾಂತರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಇಂತಹ ಪ್ರವಾಸಿತಾಣಗಳ ಕುರಿತು ಅಂಶಿ ಪ್ರಸನ್ನಕುಮಾರ್ ಅವರು ಕೃತಿ ರಚಿಸಿರುವಂಥದ್ದು ಪ್ರಶಂಸನೀಯ ಎಂದು ಹೇಳಿದರು.
ರಾಜ್ಯದಲ್ಲಿ 30 ಲಕ್ಷ ಉದ್ಯೋಗವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದೊರಕಿಸುವ ಮೂಲಕ ರಾಜ್ಯದ ಜಿಡಿಪಿಗೆ ಶೇ. 15ರಷ್ಟು ಆದಾಯವನ್ನು ಪ್ರವಾಸೋದ್ಯಮ ವಲಯದಿಂದ ನಿರೀಕ್ಷಿಸಲಾಗಿದೆ ಎಂದರು.
ರಾಜ್ಯದಲ್ಲಿರುವ ಸುಂದರ ಪ್ರವಾಸಿತಾಣಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕರ್ನಾಟಕ ಪ್ರವಾಸೋದ್ಯಮ ಜಾಲತಾಣ ತೆರೆಯಲಾಗಿದ್ದು, ಈ ಜಾಲತಾಣವನ್ನು ಒಂದು ವರ್ಷದಲ್ಲಿ 10.5 ಕೋಟಿ ಜನರು ವೀಕ್ಷಿಸಿದ್ದಾರೆ. ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯ ದೊರಕಿಸುವ ಸಲುವಾಗಿ 160 ಕಾಮಗಾರಿಯನ್ನು ಆಯ್ದ ಪ್ರವಾಸಿತಾಣಗಳಲ್ಲಿ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು.
ಹಂಪಿ, ಬಾದಾಮಿ, ಐಹೊಳೆ, ಬನವಾಸಿ ಒಳಗೊಂಡಂತೆ 20 ಆಯ್ದ ಪ್ರವಾಸಿತಾಣಗಳನ್ನು ಗುರುತಿಸಿ ವಿಶ್ವದರ್ಜೆಯ ಪ್ರವಾಸಿತಾಣವಾಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಕುರಿತು ನೀಡಲಾಗಿರುವ ಮನವಿ ಸಂಬಂಧ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಆದ್ಯತೆಯ ಮೇರೆಗೆ ಮೈಸೂರಿನ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುವುದು. ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಾಸು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.