ಬೆಂಗಳೂರು: ಮಧು ಅವರು ಹುಟ್ಟಿನಿಂದಲೇ ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರುಹೇಳಿದರು.
ನಗರದಲ್ಲಿ ಶುಕ್ರವಾರ ಡಿಕೆಶಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಅವರ ಎಲ್ಲ ಆಚಾರ-ವಿಚಾರಗಳು ಕಾಂಗ್ರೆಸ್ ತತ್ವ-ಸಿದ್ದಾಂತ ಆಧಾರದ ಮೇಲೆ ನಿಂತಿವೆ ಎಂದು ತಿಳಿಸಿದರು.
ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ. ಯಾವಾಗ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಮಾತನಾಡಬೇಕಿದೆ.
ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಆಕಾಶದಿಂದ ಹನಿಯಾಗಿ ಬಿದ್ದ ಮಳೆ ನೀರು, ಹೊಳೆ, ನದಿಯಾಗಿ ಸಾಗರ ಸೇರಬೇಕು. ಅದೇ ರೀತಿ ಹುಟ್ಟಿನಿಂದಲೇ ರಕ್ತಗತ ಕಾಂಗ್ರೆಸ್ಸಿಗರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಗೆ ಮರಳಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಜಕಾರಣದ ಆರಂಭದ ದಿನಗಳಲ್ಲಿ ನನ್ನನ್ನು ಗುರುತಿಸಿ, ಬೆಳೆಸಿದ ಧಿಮಂತ ನಾಯಕ ಬಂಗಾರಪ್ಪನವರನ್ನು ನಾನಿವತ್ತು ಸ್ಮರಿಸುತ್ತೇನೆ. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು ಡಿಕೆಶಿ ತಿಳಿಸಿದರು.
ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ ಎನ್ನುವುದು ಜನಸಾಮಾನ್ಯರ ಜತೆಗೆ ನನಗೂ ಅನಿಸಿದೆ. ಹೀಗಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ನಾನು ಅಧ್ಯಕ್ಷರನ್ನು ಮನವಿ ಮಾಡಿದ್ದೇನೆ ಎಂದು ಮಧು ಬಂಗಾರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಗೀತಾ ಶಿವರಾಜಕುಮಾರ್ ಅವರೂ ಕೂಡ ಪಕ್ಷ ಸೇರುವ ಬಗ್ಗೆ ನಿರ್ಧರಿಸಿದ್ದಾರೆ. ಅಧ್ಯಕ್ಷರು ಹಾಗೂ ಪಕ್ಷದ ಎಲ್ಲರೂ ಸೇರಿ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ -ಡಿ.ಕೆ. ಶಿವಕುಮಾರ್

