ಕಾಶಿ ವಿಶ್ವನಾಥ ದೇವಸ್ಥಾನ-ಮಸೀದಿ ಸಂಕೀರ್ಣದಲ್ಲಿ ಉತ್ಕನನಕ್ಕೆ ನ್ಯಾಯಾಲಯ ಸೂಚನೆ

ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನ-ಮಸೀದಿ ಸಂಕೀರ್ಣದಲ್ಲಿ ಉತ್ಕನನ ನಡೆಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಪುರಾತತ್ವ ಇಲಾಖೆಗೆ ಸೂಚಿಸಿದೆ.
ಕಾಶಿ ವಿಶ್ವನಾಥ ದೇಗುಲ ಜಾಗದಲ್ಲಿ ಮೊದಲು ದೇವಾಲಯ ಇತ್ತೋ? ಮಸೀದಿ ನಿರ್ಮಾಣವಾಗಿತ್ತೋ ಎಂಬುದನ್ನು ತಿಳಿಯಲು ಉತ್ಕನನ ನಡೆಸಲು ಅನುಮತಿ ನೀಡಬೇಕೆಂದು ವಕೀಲ ವಿಜಯ್ ಶಂಕರ್ ರಸ್ತೋಗಿ ಅರ್ಜಿ ಮೂಲಕ ಮನವಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಉತ್ಕನನ ನಡೆಸುವಂತೆ ಪುರಾತತ್ವ ಇಲಾಖೆಗೆ ಸೂಚಿಸಿದೆ.
ಉತ್ಕನನಕ್ಕೆ ಸಂಬಂಧಿಸಿದ ಎಲ್ಲ ಖರ್ಚುಗಳನ್ನು ಉತ್ತರ ಪ್ರದೇಶ ಸರ್ಕಾರ ಭರಿಸಬೇಕೆಂದು ಕೋರ್ಟ್ ಸೂಚಿಸಿದೆ.
1664ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ 2 ಸಾವಿರ ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ್ದಾನೆ ಎಂದು ಅರ್ಜಿದಾರರು ತಿಳಿಸಿದ್ದರು.
ಈ ಜಾಗದಲ್ಲಿ ಉತ್ಕನನ ನಡೆಸುವುದಕ್ಕೆ ಮಸೀದಿಯ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ 2020ರಲ್ಲಿ ಅರ್ಜಿ ಸಲ್ಲಿಸಿತ್ತು.