‘ಲಸಿಕೆ ಉತ್ಸವ’ ನಡೆಸಲು ಪ್ರಧಾನಿ ಮೋದಿ ಕರೆ

ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನದಡಿ ‘ಲಸಿಕೆ ಉತ್ಸವ’ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‍ನಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಜ್ಯೋತಿಬಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ದಿನವಾದ ಏ. 11 ಮತ್ತು ಏ. 14ರ ನಡುವೆ ಲಸಿಕೆ ಉತ್ಸವ ನಡೆಸುವಂತೆ ಪ್ರಧಾನಿ ಹೇಳಿದ್ದಾರೆ.
ಲಸಿಕೆ ಹಾಕಿಸಿಕೊಳ್ಳಲು ಅರ್ಹರಾಗಿರುವವರ ಪೈಕಿ ಸಾಧ್ಯವಾದಷ್ಟು ಜನರನ್ನು ಲಸಿಕೆ ಉತ್ಸವದಲ್ಲಿ ಭಾಗಿಯಾಗುವಂತೆ ಮಾಡೋಣ ಎಂದು ರಾಜ್ಯಗಳಿಗೆ ತಿಳಿಸಿದ್ದಾರೆ.
ನಾವು ಲಸಿಕೆಯ ಕಡೆಗೆ ಸಾಗುತ್ತ ಕೋವಿಡ್-19 ಪರೀಕ್ಷೆಯನ್ನು ಮರೆತಿರುವುದು ಇಂದಿನ ಸಮಸ್ಯೆಯಾಗಿದೆ. ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕಿದೆ ಎಂದು ಪ್ರಧಾನಿಗಳು ಹೇಳಿದರು.
ರಾತ್ರಿ ಕಫ್ರ್ಯೂ ಜಾರಿಗೊಳಿಸುವ ಪ್ರದೇಶಗಳಲ್ಲಿ ‘ಕೊರೊನಾ ಕಫ್ರ್ಯೂ’ ಎಂಬ ಪದವನ್ನು ಬಳಸುವಂತೆ ಪ್ರಧಾನಿ ತಿಳಿಸಿದ್ದಾರೆ.
ರಾತ್ರಿ ಕಫ್ರ್ಯೂ ಸಮಯವನ್ನು ರಾತ್ರಿ 9 ಅಥವಾ 10 ಗಂಟೆಯಿಂದ ಬೆಳಿಗ್ಗೆ 5 ಅಥವಾ 6 ಗಂಟೆಯ ವರೆಗೂ ನಿಗದಿ ಮಾಡುವುದು ಉತ್ತಮ ಎಂದವರು ಹೇಳಿದ್ದಾರೆ.
ಶೇ 70ರಷ್ಟು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಿರಬೇಕು. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾದರೂ ಸರಿಯೇ, ನಾವು ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು ಎಂದು ಹೇಳಿದರು.
ಮಾಸ್ಕ್ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಇನ್ನಷ್ಟು ಹೆಚ್ಚು ಮಾಡಬೇಕಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.