ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ 2ನೇ ಬಾರಿ ಕೊರೊನಾ ಸೋಂಕು ದೃಢವಾಗಿದೆ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಿಎಂ ಶುಕ್ರವಾರ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಸೋಂಕು ದೃಢಪಟ್ಟಿದೆ.
ಮುಖ್ಯಮಂತ್ರಿಗಳಿಗೆ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆ ಅವರ ಸಂಪರ್ಕದಲ್ಲಿದ್ದ ಮಂತ್ರಿಗಳಿಗೂ ಕ್ವಾರಂಟೈನ್‍ಗೆ ಒಳಗಾಗುವಂತೆ ಸೂಚಿಸಲಾಗಿದೆ.
ಜ್ವರದ ಹಿನ್ನಲೆಯಲ್ಲಿ ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮುಖ್ಯಮಂತ್ರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಸಿಎಂ ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಈಗಾಗಲೇ ಪಡೆದಿದ್ದಾರೆ. ಮೊದಲ ಡೋಸ್ ಪಡೆದರೂ ಅನೇಕರು ಸೋಂಕಿಗೆ ತುತ್ತಾಗುತ್ತಿದ್ದಾರೆ.
77 ವರ್ಷದ ಸಿಎಂ ಯಡಿಯೂರಪ್ಪನವರು ಕಳೆದ ಆಗಸ್ಟ್‍ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹಿಂದಿರುಗಿದ್ದರು.
ಈಗ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಪ್ರಚಾರ ಮಾಡಿ ಬಂದಿದ್ದರು. ಬೆಳಗಾವಿಯಲ್ಲಿರುವಾಗಲೇ ಜ್ವರ, ಸುಸ್ತು ಕಂಡುಬಂದು ಹೊಟೇಲ್ ನಲ್ಲಿ ಕೆಎಲ್ ಇ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದರು.
ಗುರುವಾರ ಪ್ರಚಾರ ಮಧ್ಯೆ ಅರ್ಧದಲ್ಲಿಯೇ ಮತ್ತೆ ಸುಸ್ತು, ಬಳಲಿಕೆಯಾಗಿ ಪ್ರವಾಸ ಅರ್ಧದಲ್ಲಿಯೇ ಮೊಟಕುಗೊಳಿಸಿ ಬೆಂಗಳೂರಿಗೆ ಮುಖ್ಯಮಂತ್ರಿಗಳು ವಾಪಸ್ಸಾಗಿದ್ದರು.
ಸಿಎಂ ಯಡಿಯೂರಪ್ಪಗೆ ಮತ್ತೆ ಕೊರೊನಾ

