ಕೋವಿಡ್‍ಗೆ ನಟಿ ಮಾಲಾಶ್ರೀ ಪತಿ ಕೋಟಿ ರಾಮು ಬಲಿ

ಬೆಂಗಳೂರು: ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು (52) ಅವರು ಸೋಮವಾರ ಕೊರೊನಾಗೆ ಬಲಿ ಆಗಿದ್ದಾರೆ.
ರಾಮು ಅವರಿಗೆ ಕಳೆದೊಂದು ವಾರದ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ರಾಮು ಅವರು ನಗರದ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟ ಸಮಸ್ಯೆ ಹೆಚ್ಚಾಗಿ ಅವರು ಸಾವನ್ನಪ್ಪಿದ್ದಾರೆ.
ಕನ್ನಡದಲ್ಲಿ ಹಿಟ್ ಚಿತ್ರಗಳಾದ ಲಾಕಪ್ ಡೆತ್, ಎಕೆ 47, ಕಲಾಸಿಪಾಳ್ಯ, ಸಿಬಿಐ ದುರ್ಗಾ ಸಿನಿಮಾಗಳನ್ನು ರಾಮು ನಿರ್ಮಿಸಿದ್ದರು.
90ರ ದಶಕದಲ್ಲಿಯೇ ದುಬಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಮು ಅವರು ಕನ್ನಡ ಚಿತ್ರರಂಗದಲ್ಲಿ ಕೋಟಿ ರಾಮು ಎಂದೇ ಹೆಸರು ಗಳಿಸಿದ್ದರು.
ನಟ ಮಾಲಾಶ್ರೀ ಅವರನ್ನು ರಾಮು ಅವರು ಪ್ರೀತಿಸಿ ವಿವಾಹವಾಗಿದ್ದರು.
ರಾಮು ಅವರು ಪತ್ನಿ ಮಾಲಾಶ್ರೀ, ಒಬ್ಬ ಮಗ ಮತ್ತು ಮಗಳು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಚಿತ್ರರಂಗ ರಾಮು ನಿಧನಕ್ಕೆ ಸಂತಾಪ ಸೂಚಿಸಿದೆ.