ಕೋವಿಡ್ ಮಾರ್ಗಸೂಚಿ ನಿಯಮದಿಂದ ತೊಂದರೆ ಆದವರಿಗೆ ಸರ್ಕಾರ ಪರಿಹಾರ ನೀಡಬೇಕು -ಡಿಕೆಶಿ

ಬೆಂಗಳೂರು: ಕೋವಿಡ್ ಮಾರ್ಗಸೂಚಿ ನಿಯಮದಿಂದ ತೊಂದರೆ ಆದವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಡಿ. ಕೆ. ಶಿವಕುಮಾರ್ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಗಿ ಕ್ರಮದ ಹೆಸರಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ, ಕೋವಿಡ್ ಮಾರ್ಗಸೂಚಿ ನಿಯಮಗಳಿಂದ ಯಾರಿಗೆ ತೊಂದರೆ ಆದರೂ ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.
ಲಾಕ್ ಡೌನ್ ನಿಂದ ನಷ್ಟಕ್ಕೊಳಗಾಗುವ ಎಲ್ಲ ವರ್ಗದವರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು, ಬಡ್ಡಿ ಮನ್ನಾ ಮಾಡಿ ಸಾಲ ಮರು ಪಾವತಿಗೆ ಗಡುವು ಮುಂದೂಡಬೇಕು ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಏನು ಬೇಕಾದರೂ ಕ್ರಮ ಕೈಗೊಳ್ಳಲಿ, ನಮ್ಮ ಅಭ್ಯಂತರ ಇಲ್ಲ. ಲಾಕ್ ಡೌನ್ ಎಂಬ ಪದ ಬಳಸದೆ ಎಲ್ಲವನ್ನು ಬಂದ್ ಮಾಡಿದ್ದಾರೆಂದು ಡಿಕೆಶಿ ಹೇಳಿದರು.
ಸರ್ಕಾರ ರಾಜ್ಯದ ಹಿತವನ್ನ ಕಾಪಾಡುವಲ್ಲಿ ವಿಫಲವಾಗಿದೆ, ಅವರು ಒಪಿಕೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಉಚಿತ ಲಸಿಕೆ ನೀಡಬೇಕು. ಇದಕ್ಕೆ ನಾವು ಒತ್ತಾಯಿಸುತ್ತೇವೆ. ಸರ್ಕಾರ ಎಲ್ಲ ಅಭಿವೃದ್ಧಿ ಕಾರ್ಯ ನಿಲ್ಲಿಸಿ, ಉಚಿತ ಲಸಿಕೆ ನೀಡಲಿ ಎಂದು ಡಿಕೆಶಿ ಹೇಳಿದರು.