ಬೆಂಗಳೂರು: ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಗರದ ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದರು.
ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಈ ಸಮಯದಲ್ಲಿ ನಾವು ಜನರ ಜತೆ ಇರಬೇಕು. ಜನರ ನೋವು, ಕಷ್ಟ ಎಲ್ಲ ವಿಚಾರದಲ್ಲೂ ಅವರಿಗೆ ಧ್ವನಿಯಾಗಿರಬೇಕು. ಏನಾಯ್ತು, ಹೇಗಾಯ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಜನರ ಆಕ್ರಂದನ ವಿಪರೀತ ಆಗುತ್ತಿದೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸತ್ತಿದ್ದಾರೆ ಎಂದು ಲೆಕ್ಕ ಇದೆ. ಬೇರೆ ಕಡೆಗಳಲ್ಲಿ ಇದೇ ರೀತಿ ಜನ ಸಾಯುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಜನರೇ ಮಾಹಿತಿ ನೀಡಿದ್ದಾರೆಂದರು.
ರಾಜರಾಜೇಶ್ವರಿ ನಗರ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಕೊರತೆ ಇದ್ದಾಗ ಸಂಸದ ಡಿ.ಕೆ. ಸುರೇಶ್ ಅವರು ಮಧ್ಯಪ್ರವೇಶಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಾರಣ, ಆಕ್ಸಿಜನ್ ಪೂರೈಸಲಾಯಿತು ಎಂದು ತಿಳಿಸಿದರು.
ಆರೋಗ್ಯ ಸಚಿವರ ರಾಜೀನಾಮೆ ಮಾತ್ರವಲ್ಲ, ಈ ಸರ್ಕಾರವೇ ಹೋಗಬೇಕು. 33 ಜನ ಮಂತ್ರಿಗಳು ತಾವು ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಿಗೆ ಹೋಗಲಿಲ್ಲ ಎಂದರೆ ಹೇಗೆ? ಸಚಿವ ಸುರೇಶ್ ಕುಮಾರ್ ಸತ್ತವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರಾ? ಅವರಿಗೆ ಆಗಲಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಲಿ. ರಾಜ್ಯಪಾಲರ ಆಡಳಿತ ಬಂದ ಮೇಲೆ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣ ಮಾಡುತ್ತಾರೆಂದು ಡಿಕೆ. ಶಿವಕುಮಾರ್ ಹೇಳಿದರು.
ರಾಜ್ಯ 1750 ಟನ್ ಆಕ್ಸಿಜನ್ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿತ್ತು. ಕೇಂದ್ರ 850 ಟನ್ ಕೊಟ್ಟಿದೆ. ಎಲ್ಲವನ್ನೂ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿದೆ ಎಂದರು.
ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ -ಡಿ.ಕೆ ಶಿವಕುಮಾರ್

