ಮೈಸೂರು, ಮೇ 5: ಬಿಜೆಪಿಯ ಎಚ್. ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಲಘುವಾಗಿ ನೀಡಿದ ಹೇಳಿಕೆ ವಿರುದ್ಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ ಅವರು, ವಿಶ್ವನಾಥ್ ಹಿರಿಯರಿದ್ದಾರೆ. ಅವರು ಸಿ.ಎಂ. ವಿರುದ್ದ ಪದೇ ಪದೇ ಮಾತನಾಡುವುದು ಸರಿಯಲ್ಲ. ನಿಮಗೆ ಒಳ್ಳೆಯದಾಗುವುದಿಲ್ಲ, ನಿಮ್ಮ ಸೀನಿಯರಿಟಿ ಅನುಭವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರು ರಾಜ್ಯದ ಸಿಎಂ. ಅವರನ್ನು ಪದೇ ಪದೇ ಹೀಯಾಳಿಸುವುದು ಸರಿಯಲ್ಲ. ಯಡಿಯೂರಪ್ಪ ಅವರು ಮಾತಿಗೆ ತಪ್ಪದಂತೆ ನಡೆದುಕೊಂಡಿದ್ದಾರೆ. ಚುನಾವಣೆಗೆ ನಿಲ್ಲಬೇಡಿ ಮಂತ್ರಿ ಮಾಡುವೆ ಅಂತಾ ಹೇಳಿದ್ದರು. ಅವರ ಮಾತು ಕೇಳದೆ ಸೋತರು. ಸೋತರು ಸಹ ಎಂ.ಎಲ್.ಸಿ ಮಾಡಿದ್ದಾರೆ. ನ್ಯಾಯಾಲಯದ ಆದೇಶ ಸಿಎಂ ಪಾಲನೆ ಮಾಡಿದ್ದಾರೆ ಎಮದು ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದರು.
ಸಂಸದ ಪ್ರತಾಪ್ ಸಿಂಹ ತಿರುಗೇಟು: ವಿಶ್ವನಾಥ್ ಅವರಿಗೆ ತಲೆ ಸರಿಯಿಲ್ಲ. ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಚೆನ್ನಾಗಿ ಕಣ್ಣು ಕಾಣುತ್ತಿದೆ. ಕೊರೊನಾ ಆದರೂ ಸಹಾ 5 ದಿನದಲ್ಲಿ ವಾಪಸ್ಸು ಬಂದಿದ್ದಾರೆ. ಜಿಲ್ಲಾ ಉಸ್ತುವಾರಿಗಳನ್ನು ಜನರ ಕಷ್ಟವನ್ನು ನೋಡಿ ಕಳುಹಿಸಿದ್ದಾರೆ. ಲಾಕ್‍ಡೌನ್ ಮಾಡಿದರು ರೈತರು ವ್ಯಾಪಾರಿಗಳು ಕೂಲಿ ಕಾರ್ಮಿಕರ ನೋವು ಕೇಳಿದ್ದಾರೆ
ಅವರಿಗೆ ಕಿವಿ ಕೇಳಿಸುತ್ತಿದೆ ಅವರ ಭಾವನೆ ಅರ್ಥವಾಗುತ್ತಿದೆ ಎಂದರು.
ಸಚಿವ ಮಾಡಲಿಲ್ಲ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ವಿಶ್ವನಾಥ್‍ಗೆ ಶೋಭೆ ತರುವುದಿಲ್ಲ. ಮುಂದೆ ಅವರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಶಿಸ್ತು ಕ್ರಮದ ಎಚ್ಚರಿಕೆ: ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಶಾಸಕ ವಿಶ್ವನಾಥ್‍ಗೆ ಶಾಸಕ ಎಲ್.ನಾಗೇಂದ್ರ ನೀಡಿದರು.
ಪಕ್ಷದ ಸಿದ್ದಾಂತಕ್ಕೆ ಬದ್ಧರಾಗಿ ನಡೆಯಬೇಕು. ಮುಖ್ಯಮಂತ್ರಿ ಹಾಗೂ ಪಕ್ಷದ ವಿರುದ್ಧ ಮಾತನಾಡಿದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಆಗುತ್ತೆ ಎಂದರು.
ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವೇನಲ್ಲ. ಇದನ್ನ ಅರಿತು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ನಾಗೇಂದ್ರ ಎಚ್ಚರಿಸಿದರು.
ಈ ಹಿಂದೆಯು ವಿಶ್ವನಾಥ್ ಗೆ ಹಲವು ಭಾರಿ ಎಚ್ಚರಿಕೆ ನೀಡಿದ್ದೇವೆ. ಇದು ಕಾಂಗ್ರೆಸ್ ಸಿದ್ದಾಂತದ ಪಕ್ಷವಲ್ಲ, ಬಿಜೆಪಿ ಶಿಸ್ತಿಗೆ ಬದ್ಧವಾಗಿರುವ ಪಕ್ಷ. ವಿಶ್ವನಾಥ್ ಇದನ್ನೆಲ್ಲೇ ಅರಿತು ಮಾತನಾಡಲಿ ಎಂದು ವಿಶ್ವನಾಥ್ ಗೆ ಶಾಸಕ ಎಲ್.ನಾಗೇಂದ್ರ ಎಚ್ಚರಿಸಿದರು.

